ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಐಎಂಜೆಐಎಸ್ಸಿ ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ “ನಾಡು-ನುಡಿ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ವಾಣಿಜ್ಯ ತೆರಿಗೆ ನಿರೀಕ್ಷಕರು ಹಾಗೂ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಗಮಿಸಿದ್ದರು. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಕನ್ನಡ ಭಾಷೆಯ ಪ್ರಾಚೀನತೆ, ಬಳಕೆಯ ವೈಶಿಷ್ಟ್ಯತೆ ಮತ್ತು ಮಹತ್ವದ ಬಗ್ಗೆ ತಿಳಿಸಿದರು. ಇತರ ಭಾಷೆಗಳಿಗಿಂತ ಕನ್ನಡ ಹೇಗೆ ಭಿನ್ನವಾಗಿದೆ ಎಂಬುದನ್ನು ತೌಲನಿಕವಾಗಿ ವಿವರಿಸಿದರು. ಕನ್ನಡ ಸಾಹಿತಿಗಳ ವಿವಿಧ ಕೃತಿಗಳ ಆಯ್ದ ಭಾಗಗಳನ್ನು ಉದಾಹರಿಸಿ, ಕನ್ನಡದ ಶ್ರೇಷ್ಠತೆ ಮತ್ತು ತಾಯಿನುಡಿಯ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ವೇದಿಕೆಯಲ್ಲಿ ಸಾಹಿತ್ಯ ಸಂಘದ ಸಂಯೋಜಕರು ಹಾಗೂ ಕನ್ನಡ ಪ್ರಾಧ್ಯಾಪಕರಾದ ರೇವತಿ ಹಾಗೂ ವಿದ್ಯಾರ್ಥಿ ಸಹ ಸಂಯೋಜಕಿ, ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಸೌಪರ್ಣಿಕಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾಷಾ ವಿಭಾಗದ ಉಪನ್ಯಾಸಕರು, ಬಿಬಿಎ ಮತ್ತು ಬಿಕಾಂ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ದ್ವಿತೀಯ ಬಿಕಾಂ ವಿದ್ಯಾರ್ಥಿ ವರುಣ್ ಅತಿಥಿಗಳನ್ನು ಪರಿಚಯಿಸಿದರು. ತೃತೀಯ ಬಿಕಾಂ ವಿದ್ಯಾರ್ಥಿ ಸೃಜನ್ ಆಚಾರ್ ಅವರು ಕನ್ನಡ ನಾಡು-ನುಡಿಯ ಅಭಿಮಾನ ಮೂಡಿಸುವ ಗೀತೆಯನ್ನು ಹಾಡಿದರು. ತೃತೀಯ ಬಿಕಾಂ ವಿದ್ಯಾರ್ಥಿನಿ ಶ್ರೀಜನ್ಯ ಹಾಗೂ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಸಮೀಕ್ಷಾ ಕನ್ನಡ ನಾಡು-ನುಡಿಯ ಶ್ರೇಷ್ಠತೆಯನ್ನು ಸಾರುವ ನೃತ್ಯ ಪ್ರದರ್ಶನ ಮಾಡಿದರು. ಕಾರ್ಯಕ್ರಮವನ್ನು ದ್ವಿತೀಯ ಬಿಕಾಂ ವಿದ್ಯಾರ್ಥಿನಿ ದೃತಿ ನಿರೂಪಿಸಿದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಇತಿಹಾಸ, ಪ್ರಾಚೀನತೆ ಮತ್ತು ಶ್ರೀಮಂತಿಕೆಯ ಅರಿವು ಮೂಡಿಸುವಲ್ಲಿ ಹಾಗೂ ನಾಡು-ನುಡಿಯ ಬಗ್ಗೆ ಅಭಿಮಾನ ಬೆಳೆಸುವಲ್ಲಿ ಯಶಸ್ವಿಯಾಯಿತು.

















