ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: “ವಿದ್ಯಾರ್ಥಿ ಜೀವನವು ವ್ಯಕ್ತಿತ್ವ ನಿರ್ಮಾಣದ ಮಹತ್ವದ ಹಂತ. ಈ ಹಂತದಲ್ಲಿಯೇ ಉತ್ತಮ ಗುಣಗಳನ್ನು ಬೆಳೆಸಿಕೊಂಡು, ಶಿಸ್ತು ಮತ್ತು ಪರಿಶ್ರಮವನ್ನು ಜೀವನದ ಮೌಲ್ಯಗಳನ್ನಾಗಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು ಅದಕ್ಕೆ ಸೂಕ್ತ ವೇದಿಕೆಯನ್ನು ಬಳಸಿಕೊಳ್ಳಬೇಕು. ಆಗ ಮಾತ್ರ ಅವರ ಭವಿಷ್ಯ ಉಜ್ವಲವಾಗಿ ರೂಪುಗೊಳ್ಳಲು ಸಾಧ್ಯ,” ಎಂದು ಕ್ರೀಡಾಪಟು, ಉದ್ಯಮಿ ಹಾಗೂ ಹಿರಿಯ ರಾಜಕೀಯ ಮತ್ತು ಸಾಮಾಜಿಕ ನಾಯಕರಾದ ರಾಜೇಶ್ ಕಾವೇರಿ ಹೇಳದರು.
ಅವರು ಇಲ್ಲಿನ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ‘ವಿಕ್ಟರಿ 2026′ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ವೆಂಕಟರಮಣ ದೇವ್ ಎಜುಕೇಶನಲ್ & ಕಲ್ಚರಲ್ ಟ್ರಸ್ಟ್‌ನ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪ ಪ್ರಾಂಶುಪಾಲರಾದ ಸುಜೇಯ್ ಕೋಟೆಗಾರ್, ಶ್ರೀ ವೆಂಕಟರಮಣ ಪ್ರೌಢಶಾಲೆಯ ಮುಖ್ಯೋಪಾಧ್ಯರಾದ ಕೃಷ್ಣ ಅಡಿಗ, ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ರೇಷ್ಮಾ ಡಿಸೋಜಾ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಪ್ರಮೀಳಾ ಡಿಸೋಜಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ ಪ್ರಾಸ್ತಾವಿಕ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಸುನೀತಾ ಶೆಟ್ಟಿ ನಿರೂಪಿಸಿ, ಉಪಪ್ರಾಂಶುಪಾಲರಾದ ಸುಜೇಯ್ ಕೋಟೆಗಾರ್ ವಂದಿಸಿದರು.
ವಿಕ್ಟರಿ-2026ರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಒಟ್ಟು 20 ಶಾಲೆಗಳು ಉತ್ಸಾಹದಿಂದ ಭಾಗವಹಿಸಿದ್ದವು. ವಿವಿಧ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿದರು. ಸಮಗ್ರ ಪ್ರಶಸ್ತಿಯಲ್ಲಿ ತೃತೀಯ ಸ್ಥಾನವನ್ನು ಎಸ್.ಎಂ.ಎಸ್ ಇಂಗ್ಲೀಷ್ ಮೀಡಿಯಂ ಶಾಲೆ ಬ್ರಹ್ಮಾವರ ಪಡೆದುಕೊಂಡರೆ, ಸಂದೀಪನ್ ಇಂಗ್ಲೀಷ್ ಮೀಡಿಯಂ ಶಾಲೆ ಕಂಬದಕೋಣೆ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಜಿ.ಎಂ ವಿದ್ಯಾನಿಕೇತನ ಪ್ರಥಮ ಸ್ಥಾನವನ್ನು ಪಡೆದು ಚಾಂಪಿಯನ್ ಪಟ್ಟವನ್ನು ಅಲಂಕರಿಸಿ ಗಮನಾರ್ಹ ಸಾಧನೆ ಮಾಡಿತು.
ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಪ್ರಥಮ ಸ್ಥಾನ ಪಡೆದವರಿಗೆ ₹12,222, ದ್ವಿತೀಯ ಸ್ಥಾನ ಪಡೆದವರಿಗೆ ₹8,888 ಹಾಗೂ ತೃತೀಯ ಸ್ಥಾನ ಪಡೆದವರಿಗೆ ₹5,555 ನಗದು ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

















