ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ-ಮುಳ್ಳಿಕಟ್ಟೆ ಫ್ಲೈ ಓವರ್ ಮೇಲೆ ಮೀನು ಸಾಗಾಟದ ವಾಹನವೊಂದು ಆಕ್ಸಲ್ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಘಟನೆಯಲ್ಲಿ ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮಹಾರಾಷ್ಟ್ರ ನೋಂದಣಿಯ ಈ ವಾಹನವು ಮುಂಬಯಿಯಿಂದ ಮಂಗಳೂರಿಗೆ ಮೀನು ಸಾಗಿಸುತ್ತಿತ್ತು. ಫ್ಲೈ ಓವರ್ ಮೇಲೆ ಚಲಿಸುತ್ತಿದ್ದಾಗ ವಾಹನದ ಒಂದು ಬದಿಯ ಆಕ್ಸಲ್ ತುಂಡಾಗಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ವಾಹನವು ರಸ್ತೆಯ ಡಿವೈಡರ್ ಮೇಲೆ ಪಲ್ಟಿಯಾಗಿದೆ. ವಾಹನದಲ್ಲಿ ಚಾಲಕನೊಬ್ಬನೇ ಇದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಗಂಗೊಳ್ಳಿ ಪೊಲೀಸ್ ಠಾಣೆಯ ಎಎಸ್ಐ ಆನಂದ ಹಾಗೂ ಸಿಬ್ಬಂದಿ ಮತ್ತು ಹೆದ್ದಾರಿ ಗಸ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಕ್ರೇನ್ ಮೂಲಕ ಪಲ್ಟಿಯಾದ ವಾಹನವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.












