ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಕುಂದಗನ್ನಡ ಸಂಘದ ಜಂಟಿ ಆಶ್ರಯದಲ್ಲಿ ದೀಪಾವಳಿ ಸಂಭ್ರಮಾಚರಣೆ ಕಾಲೇಜಿನ ಆವರಣದಲ್ಲಿ ನಡೆಯಿತು.
ಎಂ. ಎಸ್. ಆರ್. ಎಸ್ ಕಾಲೇಜು ಶಿರ್ವ ಇಲ್ಲಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ರಘುರಾಮ್ ಶೆಟ್ಟಿ ಊರ್ ಬೈಲು ಮಾತನಾಡಿ, ದೀಪಾವಳಿ ಭಾರತೀಯ ಕೃಷಿ ಪದ್ಧತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಹಬ್ಬ. ಈ ಹಬ್ಬ ಕೇವಲ ಬೆಳಕಿನ ಉತ್ಸವ ಮಾತ್ರವಲ್ಲದೆ, ರೈತರ ಪರಿಶ್ರಮ ಮತ್ತು ಭೂಮಿ ತಾಯಿಯ ಸಮೃದ್ಧಿಯ ಸಂಕೇತವಾಗಿದೆ. ನೆಲಪರವಾದ ಈ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಪಟಾಕಿಯನ್ನು ಸಿಡಿಸದೆ ಆಚರಿಸಬೇಕು ಎಂದರು. ಇದೇ ಸಂದರ್ಭ ನಾಥ ಪಂಥದ ಮಹತ್ವ ಹಾಗೂ ಭಸ್ಮಧಾರಣೆಯ ಆಧ್ಯಾತ್ಮಿಕ ವೈಶಿಷ್ಟವನ್ನು ವಿಶ್ಲೇಷಿಸಿದರು. ಐತಿಹಾಸಿಕವಾಗಿ ಸಾಮ್ರಾಟ್ ಅಶೋಕನ ಶಾಸನಗಳಲ್ಲಿಯೂ ದೀಪಾವಳಿಯ ಉಲ್ಲೇಖ ಇರುವುದನ್ನು ವಿವರಿಸಿದರು. ಕರಾವಳಿ ಭಾಗದ ಜಾನಪದ ಸೊಗಡಿನ ಬಲಿಂದ್ರನ ಆಗಮನದ ಸೊಲ್ಲನ್ನು ಪ್ರಸ್ತುತಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಸ್ತಾವಿಸಿದರು. ಸಭಾ ಕಾರ್ಯಕ್ರಮದ ಜೊತೆಗೆ ಸರಸ್ವತಿ ಪೂಜೆ, ವಾಹನ ಪೂಜೆ, ಗೋಪೂಜೆ ಮತ್ತು ಗದ್ದೆಗೆ ದೀಪ ಹಚ್ಚಿ ಬಲಿಂದ್ರನನ್ನು ಕರೆಯುವ ಕೃಷಿಕೇಂದ್ರಿತ ಸಾಂಪ್ರದಾಯಿಕ ಆಚರಣೆಯನ್ನು ಕಾಲೇಜಿನ ಆವರಣದಲ್ಲಿ ನಡೆಸಲಾಯಿತು. ಇದೇ ಸಂದರ್ಭ ದೀಪಾವಳಿಯ ಸಂಭ್ರಮದ ಪ್ರಯುಕ್ತ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಾಕ್ತನ ವಿದ್ಯಾರ್ಥಿ ಗುರುರಾಜ್ ಪ್ರಾರ್ಥಿಸಿ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರವೀಣಾ ಎಂ ಪೂಜಾರಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿ ಶರಣ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಕಾರ್ಯಕ್ರಮ ಸಂಯೋಜಕಿ ರಶ್ಮಿತಾ ಶೆಟ್ಟಿ ವಂದಿಸಿದರು.

















