ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬಹುಕಾಲದ ನಿರೀಕ್ಷೆಯ ವಂದೇ ಭಾರತ್ ರೈಲು ಬೈಂದೂರು ರೈಲ್ವೆ ನಿಲ್ದಾಣಕ್ಕೆ ಮೂಕಾಂಬಿಕಾ ರೋಡ್ ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿರುವುದು ಬೈಂದೂರು ರೈಲು ನಿಲ್ದಾಣದ ಮುಕುಟಕ್ಕೆ ಇನ್ನೊಂದು ಗರಿ ಸೇರಿದೆ ಎಂದು ಬೈಂದೂರು ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಜಯಾನಂದ ಹೋಬಳಿದಾರ್ ಹೇಳಿದರು.
ಅವರು ಗುರುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೂತನ ರೈಲು ಸೇವೆಯ ಆರಂಭವು ಬೆಂಗಳೂರು, ದಕ್ಷಿಣ ಕನ್ನಡ ಕರಾವಳಿ ಹಾಗೂ ಗೋವಾ ನಡುವಿನ ಸಾರಿಗೆ ಸಂಪರ್ಕಕ್ಕೆ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ. ವಂದೇ ಭಾರತ್ ರೈಲು ಸೇವೆಯಿಂದ ಬೆಂಗಳೂರು ಮತ್ತು ಕರಾವಳಿ ಭಾಗದ ನಡುವಿನ ಪ್ರಯಾಣಕ್ಕೆ ಮತ್ತಷ್ಟು ಅನುಕೂಲವಾಗಲಿದೆ. ವಿಶೇಷವಾಗಿ ಈ ಭಾಗದ ಜನರಿಗೆ ಬೆಂಗಳೂರು ಹಾಗೂ ಗೋವಾಕ್ಕೆ ಪ್ರಯಾಣಿಸಲು ಉತ್ತಮ ಅವಕಾಶ ದೊರೆಯಲಿದೆ.

ಇದಲ್ಲದೆ ಉಡುಪಿ, ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ, ಮುರ್ಡೇಶ್ವರ, ಗೋಕರ್ಣ, ಕಾರವಾರ ಹಾಗೂ ಗೋವಾದಂತಹ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ನೇರ ರೈಲು ಸಂಪರ್ಕ ಲಭ್ಯವಾಗಲಿದೆ. ಪ್ರವಾಸಿಗರು, ವ್ಯಾಪಾರಿಗಳು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು ಸೇರಿದಂತೆ ವಿವಿಧ ವರ್ಗದ ಪ್ರಯಾಣಿಕರಿಗೆ ಈ ಸೇವೆ ಪ್ರಯೋಜನಕಾರಿಯಾಗಲಿದೆ ಎಂದರು.
ವಂದೇ ಭಾರತ್ ರೈಲು ಸಂಚಾರಕ್ಕೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಿಂದ ರೈಲ್ವೆ ಸಚಿವ ಅಶಿನಿ ವೈಷ್ಣವ್, ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಇವರು ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 12ಕ್ಕೆ ಏಕಕಾಲದಲ್ಲಿ ಹಸಿರು ನಿಶಾನೆ ಮೂಲಕ ಚಾಲನೆ ನೀಡಲಿದ್ದಾರೆ. ಈ ರೈಲು ತಡರಾತ್ರಿ 12.30ಕ್ಕೆ ಬೈಂದೂರು ನಿಲ್ದಾಣ ತಲುಪಲಿದೆ. ನಿಲ್ದಾಣದಲ್ಲಿ ಸಂಸದ ಬಿ. ವೈ. ರಾಘವೇಂದ್ರ, ಶಾಸಕ ಗುರುರಾಜ ಗಂಟಿಹೊಳೆ, ರೈಲ್ವೆ ಯಾತ್ರಿ ಸಂಘದ ಸದಸ್ಯರು, ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಸ್ವಾಗತಿಸಲಿದ್ದಾರೆ. ಈ ವೇಳೆ ಸಂಸದ ಮತ್ತು ಶಾಸಕರಿಗೆ ಪೌರ ಸನ್ಮಾನ ನಡೆಯಲಿದೆ.
ನವೆಂಬರ್ 15ರ ಬಳಿಕ ಎರಡು ಕಡೆಯಲ್ಲಿ ರೈಲು ಸಂಚಾರ ಇರಲಿದ್ದು, ವಾರದ ಆರು ದಿನ ಬೆಂಗಳೂರು ಯಶವಂತಪುರದಿಂದ ಸಂಚರಿಸಲಿದೆ. ಯಶವಂತಪುರ ಬೆಳಿಗ್ಗೆ 07-35ಕ್ಕೆ ಹೊರಡುವ ರೈಲು ಸಂಜೆ 5-20ಕ್ಕೆ ಬೈಂದೂರಿಗೆ ಆಗಮಿಸಲಿದ್ದು, ರಾತ್ರಿ 9-00ಕ್ಕೆ ಮಡಗಾವ್ ತಲುಪಲಿದೆ. ಅದೇ ರೀತಿ ಮಡಗಾಂನಿಂದ ಬೆಳಿಗ್ಗೆ 8-20ಕ್ಕೆ ಹೊರಡುವ ರೈಲು ಮಧ್ಯಾಹ್ನ 11-20 ಗಂಟೆಗೆ ಬೈಂದೂರು ನಿಲ್ದಾಣಕ್ಕೆ ಆಗಮಿಸಿ ರಾತ್ರಿ 9-15ಕ್ಕೆ ಯಶವಂತಪುರ ತಲುಪಲಿದೆ. ಮಾರ್ಗಮಧ್ಯೆ ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಮುರ್ಡೇಶ್ವರ, ಗೋಕರ್ಣ ರೋಡ್ ಹಾಗೂ ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಬೆಂಗಳೂರು-ಮಡಗಾಂ ಒಟ್ಟು ಪ್ರಯಾಣದ ಅವಧಿ 13 ತಾಸುಗಳಾಗಿವೆ. ಇದರಿಂದ ಆರಾಮದಾಯಕ ಹಾಗೂ ಸಮಯ ಉಳಿತಾಯದ ಪ್ರಯಾಣವಾಗಲಿದೆ ಎಂದರು.
ಮೂಕಾಂಬಿಕಾ ರೋಡ್ ರೈಲು ನಿಲ್ದಾಣವು ಬೈಂದೂರು ತಾಲೂಕು ಕೇಂದ್ರದ ಪ್ರಮುಖ ರೈಲು ನಿಲ್ದಾಣವಾಗಿದೆ. ತಾಲೂಕಿನ ವಿವಿಧ ಭಾಗಗಳಿಂದ ಬರುವ ಸಾರ್ವಜನಿಕರಿಗೆ ರೈಲು ಸಂಚಾರದ ಸೇವೆ ನೀಡುತ್ತಿದೆ. ವಂದೇ ಭಾರತ್ ರೈಲು ನಿಲುಗಡೆಗೆ ಸಹಕರಿಸಿದ ಸಂಸದ ಬಿ. ವೈ. ರಾಘವೇಂದ್ರ ಸೇರಿದಂತೆ ಕರಾವಳಿ ಭಾಗದ ಎಲ್ಲಾ ಸಂಸದರಿಗೆ ತುಂಬು ಹೃದಯದ ಕೃತಜ್ಞತೆಗಳು ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬೈಂದೂರು ರೈಲ್ವೆ ಯಾತ್ರಿಕರ ಸಂಘದ ಕಾರ್ಯದರ್ಶಿ ಪ್ರಕಾಶ್ ಪೂಜಾರಿ, ನಾಗರಾಜ್ ಶೇಟ್, ಭೀಮೇಶ್ ಕುಮಾರ್, ಶಂಕರ ಶೇರುಗಾರ್ ಉಪಸ್ಥಿತರಿದ್ದರು.

















