ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇಲ್ಲಿನ ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.09 ರಂದು ಆಯೋಜಿಸಲಾಗಿರುವ ಬೈಂದೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಪೂರ್ವಭಾವಿ ಸಭೆ ಶಾಲೆಯ ವಠಾರದಲ್ಲಿ ಸೋಮವಾರ ನಡೆಯಿತು.
ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್ ಅವರು ಮಾತನಾಡಿ, ಇಲಾಖೆಯಿಂದ ಸಾಧ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಹಾಗೂ ಬೇಕಾಗುವ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಪ್ರದೀಪ ಕುಮಾರ ಶೆಟ್ಟಿ ಅವರು ಪ್ರತಿಭಾ ಕಾರಂಜಿ ಉದ್ದೇಶ ಮತ್ತು ಅದರ ನಿರ್ವಹಣೆಯ ಕುರಿತಾಗಿ ಮಾಹಿತಿ ನೀಡಿದರು. ಪ್ರತಿಭಾ ಕಾರಂಜಿಯ ತಾಲೂಕು ನೋಡಲ್ ಅಧಿಕಾರಿ ಸತ್ಯನಾ ಕೋಡೇರಿ ಅವರು ಕಾರ್ಯಕ್ರಮದ ಸಮಿತಿಗಳನ್ನು ರಚಿಸಿ ಅದರ ಕಾರ್ಯ ಚಟುವಟಿಕೆಯ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ನಾರಾಯಣ ಆಚಾರ ಅವರು ಕಾರ್ಯಕ್ರಮಕ್ಕೆ ಬೇಕಾಗುವ ಹೆಚ್ಚಿನ ಸಂಪನ್ಮೂಲ ಸಂಗ್ರಹಿಸುವ ಮೂಲಕ ಉತ್ತಮ ರೀತಿಯಲ್ಲಿ ಆಯೋಜಿಸಲು ಎಲ್ಲರೂ ಸಹಕರಿಸಬೇಕು ಎಂದರು.
ಸಭೆಯಲ್ಲಿ ಶಿಕ್ಷಣ ಸಂಯೋಜಕ ವೆಂಕಪ್ಪ ಉಪ್ಪಾರ, ಶಾಲಾ ಮುಖ್ಯೋಪಾಧ್ಯಾಯ ಗಂಗಾಧರ ಬಂಟ್, ದಾನಿಗಳಾದ ಹರೀಶ ಮೇಸ್ತ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಅನಿತಾ, ಹಳೆ ವಿದ್ಯಾರ್ಥಿ ಸಂಘದ ರಾಮನಾಥ ಚಿತ್ತಾಲ್, ವಲಿಯುಲ್ಲಾ, ಎಸ್ಡಿಎಂಸಿ ನಿಕಟಪೂರ್ವ ಅಧ್ಯಕ್ಷ ನಾರಾಯಣ ಕೆ., ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಸಮೂಹ ಸಂಪನ್ಮೂಲ ವ್ಯಕ್ತಿಗಳು, ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ಸತ್ಯನಾ ಕೋಡೇರಿ ನಿರೂಪಿಸಿದರು. ಶಿಕ್ಷಕರಾದ ವಿಶ್ವನಾಥ ಸ್ವಾಗತಿಸಿ, ಶ್ರೀಧರ ವಂದಿಸಿದರು.

















