ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಬಡ ರೋಗಿಗಳ ಪಾಲಿಗೆ ಆಯುಷ್ಮಾನ್ ಯೋಜನೆ ಒಂದು ಅದ್ಭುತ ವರದಾನವಾಗಿದೆ. ಅದನ್ನು ಬಳಸಿಕೊಳ್ಳುವುದು ಹೇಗೆ ಎನ್ನುವ ಅರಿವು ನಮ್ಮೆಲ್ಲರಲ್ಲೂ ಸರಿಯಾಗಿ ಇದ್ದಾಗ ಮಾತ್ರ ಆ ಯೋಜನೆಯ ಫಲವನ್ನು ಪಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಆಯುಷ್ಮಾನ್ ಯೋಜನೆಯ ಬಗ್ಗೆ ತಿಳಿದು ಅದನ್ನು ಇತರರಿಗೂ ತಿಳಿಸುವಲ್ಲಿ ನಾವು ಮುಂದಾಗಬೇಕು ಎಂದು ಕೆ.ಎಂ.ಸಿಯ ಆರೋಗ್ಯ ಮಿತ್ರ ವಿಭಾಗದ ಸುಜನ್ಮಾಲಾ ಅಭಿಪ್ರಾಯಪಟ್ಟರು.
ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಇಲ್ಲಿನ ಎಸ್ ವಿ ಕಾಮರ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಆಯುಷ್ಮಾನ್ ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಪ್ರಾಂಶುಪಾಲೆ ಕವಿತಾ ಎಂಸಿ ಅಧ್ಯಕ್ಷತೆ ವಹಿಸಿದ್ದರು. ಬಿಲ್ಲವರ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಬಿಲ್ಲವ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಉಪನ್ಯಾಸಕಿ ಅಕ್ಷಯ ಆರ್. ಖಾರ್ವಿ ಪ್ರಸ್ತಾವಿಕ ಮಾತುಗಳಾಡಿದರು.
ಎಸ್. ವಿ ಕಾಮರ್ಸ್ ಕ್ಲಬ್ ಸಂಯೋಜಕ ನರೇಂದ್ರ ಎಸ್. ಗಂಗೊಳ್ಳಿ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಸುಗುಣ ಆರ್.ಕೆ. ಅಭಿಪ್ರಾಯಗಳನ್ನು ಹಂಚಿಕೊಂಡರು.
ವಿದ್ಯಾರ್ಥಿ ಪ್ರತಿನಿಧಿಗಳಾದ ಸನ್ನಿಧಿ ಮತ್ತು ಶ್ರೀ ಲಕ್ಷ್ಮಿ ಉಪಸ್ಥಿತರಿದ್ದರು. ಫ್ಲೇವನ್ ಲೋಬೊ ಸ್ವಾಗತಿಸಿದರು. ದೀಪಾಲಿ ಪ್ರಾರ್ಥಿಸಿದರು. ಶ್ರೀನಿವಾಸ ಪೈ ನಿರೂಪಿಸಿ, ತನ್ವಿ ವಂದಿಸಿದರು.














