ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬ್ಯಾಂಕ್ನಲ್ಲಿ ವೃತ್ತಿಯನ್ನು ನಿರ್ವಹಿಸುತ್ತಿದ್ದರೂ ಕನ್ನಡ ಭಾಷೆ ಗೌರವವನ್ನು ತಂದುಕೊಟ್ಟಿದೆ. ಕನ್ನಡ ಭಾಷೆಗೆ ಋಣಿಯಾಗಿರುತ್ತೇನೆ ಎಂದು ಕವಿ ಹೆಚ್.ಡುಂಡಿರಾಜ್ ಹೇಳಿದರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು, ಪದವಿ ಪೂರ್ವ ಕಾಲೇಜು ಹಾಗೂ ಕನ್ನಡ ವಿಭಾಗದ ವತಿಯಿಂದ ‘ಸಾಹಿತ್ಯ ಮತ್ತು ಪತ್ರಿಕೆ’ ಎನ್ನುವ ವಿಚಾರದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಕನ್ನಡ ಭಾಷೆ ಎನ್ನುವುದು ನನಗೆ ಗೌರವ ಮತ್ತು ಮನ್ನಣೆಯನ್ನು ತಂದುಕೊಟ್ಟಿದೆ. ಕುಂದಾಪುರದ ಹಟ್ಟಿಕುದ್ರಿನ ನಾನು ಕುಂದಗನ್ನಡ ಭಾಷೆಯನ್ನು ಆಡುವುದನ್ನು ಬಿಟ್ಟಿಲ್ಲ. ಕನ್ನಡ ಭಾಷೆ ನನ್ನ ಜೀವಾಳ, ಉಸಿರಿರುವ ತನಕ ಕನ್ನಡ ಸೇವೆಯನ್ನು ಮಾಡುತ್ತೇನೆಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ತನ್ನ ಹನಿಗವನವನ್ನು ಹೇಳಿ ನಗೆಗಡಲಲ್ಲಿ ತೇಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಪ್ರತಿಯೊಬ್ಬರಿಗೂ ತಮ್ಮ ಶೈಕ್ಷಣಿಕ ಅವಧಿಯಲ್ಲಿ ಉಪನ್ಯಾಸ ಕೊಟ್ಟ ಮಹನೀಯರ ನೆನಪಿರುತ್ತದೆ. ಹಾಗೆ ನೀವು ಅದೃಷ್ಟಶಾಲಿಗಳು ಒಬ್ಬ ಶ್ರೇಷ್ಠ ಕವಿಯ ಮಾತುಗಳನ್ನು ಆರಿಸಿದ್ದೀರಿ ನೀವು ಕೂಡ ಕನ್ನಡ ಸೇವೆಯನ್ನು ಬೇರೆ ಬೇರೆ ರೀತಿಯಲ್ಲಿ ಮಾಡಲು ಸಾಧ್ಯ ಎಂದರು.
ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಯು.ಎಸ್ ಶಣೈ ಅತಿಥಿಗಳನ್ನು ಪರಿಚಯಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಸರೋಜ ಎಂ. ಅವರು ಧನ್ಯವಾದಗೈದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಮಂಜುನಾಥ್ ಕೆ. ಎಸ್. ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.














