ಕುಂದಾಪುರ: ಜನಪ್ರತಿನಿಧಿ ಎಂದೆನಿಸಿಕೊಂಡವರಿಗೆ ಊರಿನ ಪ್ರತಿ ಮನೆಯ ಮಾತು ಹಾಗೂ ಮನೆಯ ಪ್ರತಿಯೊಬ್ಬರ ಮನಸ್ಸಿನ ಮಾತು ತಿಳಿದಿರಬೇಕು. ಅದರೊಂದಿಗೆ ಜನಸಾಮಾನ್ಯರ ಬದುಕು ಹಸನಾಗಿಸಲು ಬೇಕಾದ ಯೋಚನೆ ಹಾಗೂ ಯೋಜನೆಯನ್ನು ಅನುಷ್ಠಾನಗೊಳಿಸುವ ಬದ್ಧತೆ ಇರುಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಪುರಸಭೆಯ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಉಚಿತ ಗ್ಯಾಸ್ ಸಂಪರ್ಕ ವಿತರಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿದ ಬಳಿಕ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಅವರು ಮಾತನಾಡಿದರು. ಸಂಸದರು ಹಾಗೂ ಶಾಸಕರ ಕ್ಷೇತ್ರ ವ್ಯಾಪ್ತಿ ದೊಡ್ಡದಿರುವುದರಿಂದ ಎಲ್ಲಾ ಜನರನ್ನು ತಲುಪಲು ಸಾಧ್ಯವಿಲ್ಲ. ಆದರೆ ಸ್ಥಳೀಯಾಡಳಿತ ಪ್ರತಿನಿಧಿಗಳಿಗೆ ಆ ಅವಕಾಶವಿದೆ. ತಮ್ಮ ಕ್ಷೇತ್ರದ ಪ್ರತಿ ಮನೆಯ ವ್ಯಕ್ತಿಯನ್ನೂ ಸಂಪರ್ಕಿಸಿ ಅಲ್ಲಿನ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸವಾಗಬೇಕು ಎಂದರು.
ಪುರಸಭೆ ಅಧ್ಯಕ್ಷೆ ಕಲಾವತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಪುರಸಭಾ ಸದಸ್ಯರ ಪರವಾಗಿ ಗುಣರತ್ನ ಅಭಿನಂದಿಸಿದರು. ಶಲಿತಾ ಫನಾನುಭವಿಗಳ ಪಟ್ಟಿ ವಾಚಿಸಿದರು. ಜ್ಯೋತಿ ನಿರೂಪಿಸಿದರು.