ಬೈಂದೂರು: ದೇಶದಲ್ಲಿ ಕೆಲವು ಕ್ಷುಲ್ಲಕ ಕಾರಣಕ್ಕಾಗಿ ಅಸಹಿಷ್ಣುತೆ ಹೆಸರಿನಲ್ಲಿ ರಾಜಕೀಯ ಮಾಡುವ ಸಾಹಿತಿಗಳು, ಸ್ವಯಂಘೋಷಿತ ಬುದ್ದಿಜೀವಿಗಳು ವಿಪರೀತ ಹೇಳಿಕೆಗಳಿಂದ ಸ್ವಾಥ್ಯ ಸಮಾಜದ ಸಾಮರಸ್ಯ ಹಾಳು ಮಾಡುವುದಲ್ಲದೇ ಕೆಲವರು ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಾರೆ. ಆದರೆ ಭಯೋದ್ಪಾದರ ದಾಳಿ, ಶತ್ರುರಾಷ್ಟ್ರಗಳಿಂದ ದೇಶ ಹಾಗೂ ದೇಶವಾಸಿಗಳನ್ನು ಕಾಯುವ ಸೈನಿಕರು ವೀರಮರಣ ಹೊಂದಿದರೆ ಇವರಿಗೆಲ್ಲ ಏನೂ ಅನ್ನಿಸದಿರುವುದು ದೊಡ್ಡ ದುರಂತ ಎಂದು ಭಾರತೀಯ ಭೂಸೇನೆಯ ನಿವೃತ್ತ ಯೋಧ ಎಂ. ಗಣಪತಿ ಗೌಡ ಎಳಜಿತ್ ವಿಷಾದಿಸಿದರು.
ಬೈಂದೂರು ತೊಂಡೆಮಕ್ಕಿಯಲ್ಲಿ ಜೈ ಜವಾನ್ ವೀರ ಯೋಧರ ಸರಣ ಸಮಿತಿಯ ಮೂರನೇ ವರ್ಷದ ವಾರ್ಷಿಕೋತವದಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ವವ ಪ್ರಯುಕ್ತ ಯೋಧರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿಶ್ವದಲ್ಲಿ ಅತಿಹೆಚ್ಚು ಯುವಶಕ್ತಿ ಹೊಂದಿದ ದೇಶ ಭಾರತ. ಇಲ್ಲಿನ ಸೈನಿಕರ ಕಾರ್ಯವೈಖರಿ ಪ್ರಪಂಚವೇ ಹುಬ್ಬೇರಿಸುವಂತೆ ಮಾಡಿದೆ. ಆದರೆ ಇತ್ತೀಚಿನ ದಿನಗಳಲ್ಲ್ಲಿ ಹೆಚ್ಚಿನ ಯುವಕರು ಜಡತ್ವ ಹೊಂದಿದ್ದು, ಇದರಿಂದ ಹೊರಗೆ ಬಂದು ಇಂದಿನ ಸ್ಥಿ-ಗತಿಗಳ ಬಗ್ಗೆ ಚಿಂತನೆ ಮಾಡಬೇಕು. ಗ್ರಾಮೀಣ ಭಾಗದ ಮಧ್ಯಮ ವರ್ಗದವರನ್ನು ಹೊರತುಪಡಿಸಿ ಶ್ರೀಮಂತರು, ನಗರವಾಸಿಗಳು ಸೇನೆಯಲ್ಲಿ ಕಾಣುವುದು ವಿರಳ ಎಂದರು.
ಮಾಜಿ ಯೋಧ ಜಾನ್ ಸಿ.ಥಾಮಸ್ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ನಾವು ಮತ್ತು ನಮ್ಮ ಕುಟುಂಬ ಎಂಬ ಸ್ವಾರ್ಥದಲ್ಲಿ ಬದುಕುತ್ತಿದ್ದೇವೆ. ನಾವು ನಿಶ್ಚಿಂತೆಯಿಂದ ಸುಂದರ ಬದುಕು ಕಾಣಲು, ತಮ್ಮ ಜೀವದ ಹಂಗು ತೊರೆದು ನಮ್ಮನ್ನು ಹಾಗೂ ನಮ್ಮ ದೇಶವನ್ನು ಹಗಲಿರುಳು ಕಾಯುತ್ತಿರುವ ಸೈನಿಕರ ನೆನಪು ಯಾರಿಗೂ ಆಗದಿರುವುದು ಬೇಸರದ ಸಂಗತಿ ಎಂದರು.
ಭಾರತೀಯ ನೌಕಾದಳದ ನಿವೃತ್ತ ಯೋಧ ಬಾಬು ಪೂಜಾರಿ ಮೈದಿನಪುರ ಮತ್ತು ಭೂಸೇನೆಯ ನಿವೃತ್ತ ಯೋಧ ಕೃಷ್ಣಯ್ಯ ಶೇರುಗಾರ್ ಬಸ್ರೂರು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಜೇಶ್ ಎಂ. ಪ್ರಾಸ್ತಾವಿಸಿ, ಸಮಿತಿಯ ಅಧ್ಯಕ್ಷ ಸರೇಶ ದೇವಾಡಿಗ ಬಂಕೇಶ್ವರ ವಂದಿಸಿದರು. ಮಾಜಿ ಅಧ್ಯಕ್ಷ ಸುರೇಶ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಹುತಾತ್ಮರಾದ ಸೈನಿಕರಿಗೆ ಮೌನಪ್ರಾರ್ಥನೆಯ ಮೂಲಕ ಶೃಂದ್ಧಾಂಜಲಿ ಅರ್ಪಿಸಲಾಯಿತು. ಕೊನೆಯಲ್ಲಿ ಶಾಲಾ ಮಕ್ಕಳಿಂದ ನೃತ್ಯ ಮತ್ತು ತೆಕ್ಕೆಟ್ಟೆ ಕನ್ನುಕೆರೆ ಶಿವಶಕ್ತಿ ಕಲಾತಂಡದವರಿಂದ ನಾಟಕ ಪ್ರದರ್ಶನಗೊಂಡಿತು.