ಬೈಂದೂರು: ಬಿಜೂರು ಗ್ರಾಮದ 2ನೇ ವಾರ್ಡಿನ ಸಾಲಿಮಕ್ಕಿ ಭಾಗದ ನಿವಾಸಿಗಳು ಈ ಬಾರಿಯ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ ಕೆ. ಗೋಪಾಲ ಪೂಜಾರಿ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಈ ಭಾಗದಲ್ಲಿ ಸಮರ್ಪಕ ರಸ್ತೆ ದುರಸ್ತಿ, ಚರಂಡಿ, ಕುಡಿಯುವ ನೀರು, ದಾರಿದೀಪ, ಸೇತುವೆ ನಿರ್ಮಾಣ ಮೊದಲಾದ ಮೂಲಸೌಕರ್ಯಕ್ಕಾಗಿ ನಾವು ಕಳೆದ ನಾಲ್ಕು ದಶಕದಿಂದ ಹೋರಾಟ ನಡೆಸುತ್ತಾ ಬಂದಿದ್ದೇವೆ, ಆದರೆ ಇದುವರೆಗೂ ನಮ್ಮ ಬೇಡಿಕೆ ಈಡೇರಿಲ್ಲ. ಚುನಾವಣಾ ಸಂದರ್ಭದಲ್ಲಿ ಈ ಭಾಗಕ್ಕೆ ಭೇಟಿ ನೀಡುವ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ನುಣುಚಿಕೊಳ್ಳುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಇಲ್ಲಿನ ಸಮಸ್ಯೆಗಳಿಗೆ ಮತ್ತು ಮತದಾನ ಬಹಿಷ್ಕಾರ ಹಾಕಿದ ಗ್ರಾಮಸ್ಥರನ್ನು ಸ್ಪಂದಿಸಿದ ’ವಿಜಯವಾಣಿ’ ಸಚಿತ್ರ ವರದಿ ಪ್ರಕಟಿಸಿತ್ತು.
ಗ್ರಾಮಸ್ಥರ ಸಮಸ್ಯೆ ಆಲಿಸಿದ ಶಾಸಕರು ಈಗ ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಭರವಸೆ ನೀಡಲು ಸಾಧ್ಯವಿಲ್ಲ, ಚುನಾವಣೆಯ ಬಳಿಕ ಇಲ್ಲಿನ ರಸ್ತೆ ದುರಸ್ತಿ ಹಾಗೂ ಸಾಲಿಮಕ್ಕಿ ಕಾಲೋನಿಯ ನಿವಾಸಿಗಳಿಗೆ ಹಕ್ಕುಪತ್ರ ದೊರಕಿಸಿಕೊಡಲು ಪ್ರಯತ್ನ ಮಾಡಲಾಗುವುದು ಎಂದು ಸಮಜಾಯಿಸಿ ನೀಡಿದರು. ಪರಿಸರದ ಅನೇಕ ಮಹಿಳೆಯರೂ ಕೂಡಾ ಈ ಭಾಗದ ಕೆಲವು ಜ್ವಲಂತ ಸಮಸ್ಯೆಗಳನ್ನು ಶಾಸಕರ ಮುಂದೆ ತೆರೆದಿಟ್ಟರು. ಇದಕ್ಕೆಲ್ಲ ಚುನಾವಣೆ ಮುಗಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಮಹಿಳೆಯರಿಗೆ ಮನವರಿಕೆ ಮಾಡಿದರು. ಇವೆದಲ್ಲದರ ಮಧ್ಯೆ ಚರ್ಚೆಗಳು ಮುಗಿಯುವ ಹಂತದಲ್ಲಿ ಜಿಪಂ, ತಾಪಂ ಚುನಾವಣೆಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಚುನಾಯಿಸಬೇಕೆಂದು ಮನವಿ ಮಾಡಲು ಶಾಸಕರು ಮರೆಯಲಿಲ್ಲ.
ಕಾಂಗ್ರೆಸ್ ಮುಖಂಡರಾದ ರಘುರಾಮ ಶೆಟ್ಟಿ, ಜಿ. ಗೋಕುಲ್ ಶೆಟ್ಟಿ, ಗೌರಿ ದೇವಾಡಿಗ, ಜನಾರ್ದನ ದೇವಾಡಿಗ, ಸುಂದರ ಕೊಠಾರಿ, ಪ್ರಕಾಶ ಪೂಜಾರಿ ಉಪಸ್ಥಿತರಿದ್ದರು.