ಗಂಗೊಳ್ಳಿ: ಬೆಳೆದ ಮಕ್ಕಳನ್ನು ಪ್ರೀತಿಸಿ ಆದರೆ ಮುದ್ದುಮಾಡಲು ಹೋಗಬೇಡಿ. ಯಾಕೆಂದರೆ ಮುದ್ದು ಮಕ್ಕಳನ್ನು ಹಾಳುಮಾಡುತ್ತದೆ. ಆದರೆ ಪ್ರೀತಿ ಮಕ್ಕಳನ್ನು ಬೆಳೆಸುತ್ತದೆ ಎಂದು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಗಂಗೊಳ್ಳಿಯ ರೋಟರಿ ಸಭಾಂಗಣದಲ್ಲಿ ನಡೆದ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಫ್ರೌಢಶಾಲೆಯ ಶಿಕ್ಷಕ ರಕ್ಷಕ ಸಭೆಯ ಪೂರ್ವಭಾವಿಯಾಗಿ ನಡೆದ ಉಪನ್ಯಾಸ ಕಾರ‍್ಯಕ್ರಮದಲ್ಲಿ ಮಕ್ಕಳು ಮತ್ತು ಪೋಷಕರ ಜವಾಬ್ದಾರಿ ಎನ್ನುವ ವಿಚಾರದ ಕುರಿತಂತೆ ಮಾತನಾಡಿದರು.
ಪ್ರತಿ ಮಕ್ಕಳು ನೂರಕ್ಕೆ ನೂರು ಅಂಕಗಳನ್ನು ತೆಗೆಯಲು ಸಾಧ್ಯವಿಲ್ಲ. ಅಂಕವೊಂದನ್ನೇ ಮಕ್ಕಳ ಬೆಳವಣಿಗೆಯ ಮಾನದಂಡವಾಗಿಸುವುದು ಸರಿಯಲ್ಲ. ಮಕ್ಕಳಿಗೆ ಒಳ್ಳೆಯತನವನ್ನು ಕಲಿಸಿ. ಅಂತಹ ಮಕ್ಕಳು ಉತ್ತಮ ಅಂಕಗಳನ್ನು ಖಂಡಿತಾ ಗಳಿಸಬಲ್ಲರು. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರು ಹೆತ್ತವರು ಸ್ನೇಹಿತರು ಸುತ್ತಲಿನ ಸಮಾಜ ಎಲ್ಲರ ಜವಾಬ್ದಾರಿಯೂ ಪ್ರಮುಖವಾದುದು ಎಂದು ಅವರು ಅಭಿಪ್ರಾಯಪಟ್ಟರು.
ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯಿನಿ ಶಾಂತಿ ಕ್ರಾಸ್ತಾ ಸ್ವಾಗತಿಸಿ ವಂದಿಸಿದರು. ಕಾರ‍್ಯಕ್ರಮದಲ್ಲಿ ಶಿಕ್ಷಕರು ಶಿಕ್ಷಕ ರಕ್ಷಕ ಸಮಿತಿಯ ಪದಾಧಿಕಾರಿಗಳು ಹೆತ್ತವರು ಪೋಷಕರು ಉಪಸ್ಥಿತರಿದ್ದರು.









