ಕುಂದಾಪುರ: ಚಿಕ್ಕನ್‌ಸಾಲ್ ರಸ್ತೆಯ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಗುರುಪರಾಶಕ್ತಿ ಮಠ, ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮಿಗಳ ಅನುಗ್ರಹದೊಂದಿಗೆ ವೇ. ಮೂ. ಕೆ. ಚಂದ್ರಶೇಖರ ಸೋಮಯಾಜಿಯವರ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿವಿದಾನದೊಂದಿಗೆ ಸಾಂಗವಾಗಿ ನೆರವೇರಿತು.
ವೈಭವದ ಮೆರವಣಿಗೆ : ಶ್ರೀ ಬಗಳಾಂಬ ತಾಯಿಗೆ ಸಮರ್ಪಿಸಲಾದ ರಜತ ಪ್ರಭಾವಳಿಯನ್ನು ವಿದ್ಯುಕ್ತವಾಗಿ ಸಕಲ ಮಂಗಳವಾದ್ಯ ಘೋಷಗಳೊಂದಿಗೆ ಸಂಭ್ರಮ ಸಡಗರದಿಂದ ಬರಮಾಡಿಕೊಳ್ಳಲಾಯಿತು. ಪೂರ್ಣಕುಂಭ ಹಿಡಿದು ಸಾಗುವ ಮಹಿಳೆಯರ ದಂಡು, ಚಂಡೆವಾದನ ಮೆರವಣಿಗೆಗೆ ಮೆರಗು ನೀಡಿದವು. ಕುಂದಾಪುರದ ಮಾಸ್ತಿಕಟ್ಟೆಯಿಂದ ಆರಂಭಗೊಂಡ ಮೆರವಣಿಗೆಯು ಸುಂದರವಾಗಿ ಅಲಂಕರಿಸಿದ ತೆರೆದ ವಾಹನದಲ್ಲಿ ರಜತ ಪ್ರಭಾವಳಿಯನ್ನು ಇರಿಸಿ ದೇವಳಕ್ಕೆ ತರಲಾಯಿತು. ದೇವಳವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದ್ದು, ಎಲ್ಲಡೆಯೂ ಸಂಭ್ರಮದ ವಾತಾವರಣ ಮೂಡಿದ್ದು, ಭಕ್ತಿ ಭಾವದಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡರು.
ರಜತ ಪ್ರಭಾವಳಿ ಸಮರ್ಪಣೆ: ಈ ಶುಭ ಸಂದರ್ಭದಲ್ಲಿ ಶ್ರೀ ಬಗಳಾಂಬ ತಾಯಿಗೆ ರಜತ ಪ್ರಭಾವಳಿಯನ್ನು ಸಮರ್ಪಿಸಲಾಯಿತು. ಪ್ರಭಾವಳಿಯಲ್ಲಿ ಎರಡು ಮಕರ, ಎರಡು ಸಿಂಹ, ಸೂರ್ಯ ಚಂದ್ರ ಸಹಿತ ಛತ್ರ ಚಾಮರವನ್ನೊಳಗೊಂಡ ಪತಾಕೆಗಳನ್ನು ಬಸ್ರೂರಿನ ಶಿಲ್ಪಿ ರಾಮಕೃಷ್ಣ ಆಚಾರ್ಯ ಉತ್ತಮವಾಗಿ ನಿರ್ಮಿಸಿ ಕೊಟ್ಟಿದ್ದು, ಶ್ರೀ ಬಗಳಾಂಬ ತಾಯಿ ಸನ್ನಿಧಿಯ ಭಕ್ತರು ಶ್ರೀ ದೇವಿಗೆ ಸಮರ್ಪಿಸಿದರು.
ಪ್ರತಿಷ್ಠಾ ವರ್ಧಂತಿ: ದೇವಳದ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಅಂಗವಾಗಿ ಗಣಯಾಗ, ಸತ್ಯನಾರಾಯಣ ಪೂಜೆ, ಗುರು ಸನ್ನಿಧಿಯಲ್ಲಿ ನವಕ ಪ್ರಧಾನ ಕಲಶಾಭಿಷೇಕ, ಪರಿವಾರ ದೇವರಿಗೆ ಕಲಶಾಭಿಷೇಕ, ಸಪ್ತಶತಿ ಪಾರಾಯಣ, ಕಲಾಭಿವೃದ್ಧಿ ಹೋಮ, ಬ್ರಹ್ಮಕಲಶಾಭಿಷೇಕ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ಋತ್ವಜರ ವೇದಮಂತ್ರ ಘೋಷಗಳೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಅಚ್ಚುಕಟ್ಟಾಗಿ ನೆರವೇರಿತು.
ಯಾಗ ಪೂರ್ಣಾಹುತಿ: ಭಕ್ತ ಜನರ ಸಂಕಷ್ಟ ಪರಿಹಾರಕ್ಕಾಗಿ, ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡ ಶತಚಂಡಿಕಾಯಾಗದ ಪೂರ್ಣಾಹುತಿ ವೇ. ಮೂ. ಚಂದ್ರಶೇಖರ ಸೋಮಯಾಜಿಯವರ ನೇತೃತ್ವದಲ್ಲಿ ಸಂಪನ್ನಗೊಂಡಿತು. ಯಾಗದಲ್ಲಿ ನೂರು ಕೆ.ಜಿ ಅಕ್ಕಿ, ನೂರು ಕೆ.ಜಿ ಬೆಲ್ಲ, ೨೫ಕೆ.ಜಿ ತುಪ್ಪ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಕಲ್ಲುಸಕ್ಕರೆ, ಯಾಲಕ್ಕಿ, ಹಣ್ಣುಹಂಪಲು ಮೊದಲಾದ ದ್ರವ್ಯಗಳನ್ನು ಬಳಸಿಕೊಳ್ಳಲಾಗಿತ್ತು. ಸಾವಿರಾರು ಭಕ್ತರು ಶ್ರೀ ದೇವಳಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಯಾಗದಲ್ಲಿ ಪಾಲ್ಗೊಂಡರು. ದೇವಳದ ಉತ್ಸವ ಸಮಿತಿ ನೂಕುನುಗ್ಗಲು ಆಗದಂತೆ ಆಗಮಿಸುವ ಭಕ್ತರಿಗೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿತ್ತು.
ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಳದ ಪ್ರದಾನ ಅರ್ಚಕ ಗಣಪತಿ ಸುವರ್ಣ, ಶ್ರೀಮತಿ ಜಲಜ ಸುವರ್ಣ, ಉತ್ಸವ ಸಮಿತಿ ಗೌರವಾಧ್ಯಕ್ಷ ಕೆ. ಬಿ. ಪ್ರಕಾಶ್, ಅಧ್ಯಕ್ಷ ಸೀತರಾಮ ಹೇರಿಕುದ್ರು, ಕಾರ್ಯದರ್ಶಿ ರಮೇಶ್ ಮಕ್ಕಿ, ಉದಯಕುಮಾರ್, ವೀಣಾ ಪ್ರಕಾಶ್, ಪೂರ್ಣಿಮಾ, ರತ್ನ ಕೋಟೇಶ್ವರ, ಶರತ್, ರಾಜು ಮಠದಬೆಟ್ಟು, ಗಣೇಶ್ ಮೆಂಡನ್, ಕರುಣಾಕರ, ಅಣ್ಣಯ್ಯ ಕೋಡಿ, ಸುಶೀಲ ಮರವಂತೆ, ವಿನಯಾ ಹೇರಿಕುದ್ರು, ಶಕುಂತಲ ಗುಲ್ವಾಡಿ, ಜನಾರ್ಧನ , ಚಂದ್ರಶೇಖರ ಹಾಗೂ ಸರ್ವಸದಸ್ಯರು, ಇನ್ನಿತರ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾತ್ರಿ ರಂಗ ಪೂಜೆ, ಮಹಾಪೂಜೆ ನಡೆಯಿತು. ಬಳಿಕ ಕಟೀಲು ಶ್ರೀ ದುರ್ಗಾರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರುಗಿತು.

















