ಇತಿಹಾಸ ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವದ ಅಂಗವಾಗಿ ೧೦೦೮ ತೆಂಗಿನಕಾಯಿ ಅಷ್ಟೋತ್ತರ ಸಹಸ್ರನಾಳಿಕೇರ ಮಹಾ ಗಣಯಾಗ ಮತ್ತು ನವಚಂಡೀ ಹವನ ಋತ್ವಿಜರ ವೇದ ಮಂತ್ರ ಘೋಷಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಾಂಗವಾಗಿ ನೆರವೇರಿತು.
ನವಗ್ರಹ ಹವನ, ಧನ್ವಂತರಿ ಹವನ, ಗಣಸೂಕ್ತ ಹವನ, ದುರ್ಗಾ ಹೋಮ, ಚಂಡಿಕಾ ಪಾರಾಯಣ ಸೇರಿದಂತೆ ಮೊದಲಾದ ಹವನಗಳು ವಿವಿಧ ಧಾರ್ಮಿಕ ವಿಧಿ ವಿಧಾನಗಳು ಅಚ್ಚುಕಟ್ಟಾಗಿ ಜರುಗಿತು. ೧೦೦೮ ತೆಂಗಿನ ಕಾಯಿ ಅಷ್ಟೋತ್ತರ ಸಹಸ್ರನಾಳಿಕೇರ ಮಹಾ ಗಣಯಾಗ ಮತ್ತು ನವಚಂಡೀ ಹವನ, ಅಧಿವಾಸ ಹವನ, ಕಲಾ ತತ್ವ ಹವನ, ಶ್ರೀ ಸ್ವಾಮಿಗೆ ೧೦೮ ಕಲಶಾಭಿಷೇಕ, ಕನಕಾಭೀಷೇಕ, ಮಹಾ ಪೂಜೆ ವಿದ್ಯುಕ್ತವಾಗಿ ನಡೆಯಿತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ದೇವತಾ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಂದು ರಾತ್ರಿ ಸಂಕಷ್ಟ ಚತುರ್ಥಿ ಮಹಾಪೂಜೆ ನಡೆಯಿತು. ದೇವಳವನ್ನು ಸಂಪೂರ್ಣ ಪುಷ್ಪಲಂಕಾರಗಳಿಂದ ಅಲಂಕರಿಸಲಾಗಿತ್ತು. ದೇವಳದ ಧರ್ಮದರ್ಶಿ ಹೆಚ್. ರಾಮಚಂದ್ರ ಭಟ್, ಬಾಲಚಂದ್ರ ಭಟ್ ಮೊದಲಾದವರು ಉಪಸ್ಥಿತರಿದ್ದರು.