ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬಡವ ಶ್ರೀಮಂತರೆಂಬ ಹಂಗು ಹಮ್ಮಿಲ್ಲದೇ ಎಲ್ಲರನ್ನೂ ಪ್ರಭಾವಿಸುವ ಶಕ್ತಿಶಾಲಿ ಮಾಧ್ಯಮವೆಂದರೆ ಕಲೆ. ಅದರ ಮೂಲಕವೇ ಸಮುದಾಯವನ್ನು ತಲುಪಲು ಮತ್ತು ಎಚ್ಚರವಾಗಿರಿಸಲು ಸಾಧ್ಯವಿದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ್ ಜೋಗಿಜೆಡ್ಡು ಹೇಳಿದರು.
ಅವರು ಸುರಭಿ ರಿ. ಬೈಂದೂರು ಸಂಸ್ಥೆಯ ರಜತಯಾನ ತಿಂಗಳ ತಿರುಳು ಕಾರ್ಯಕ್ರಮದ ಅಂಗವಾಗಿ ಸಮಷ್ಟಿ ಪ್ರತಿಷ್ಠಾನ ರಿ. ಹಾಗೂ ಸ್ನೇಹ ತರಂಗ ಬೈಂದೂರು ಸಹಯೋಗದೊಂದಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಮೂರು ದಿನಗಳ ಕಾಲ ಶಾರದಾ ವೇದಿಕೆಯಲ್ಲಿ ಹಮ್ಮಿಕೊಂಡ ಯಕ್ಷ – ಗೊಂಬೆ ವೈಭವ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಮಹಾಲಿಂಗ ನಾಯ್ಕ್ ಜೋಗಿಜೆಡ್ಡು ಅವರನ್ನು ಸನ್ಮಾನಿಸಲಾಯಿತು. ಸುರಭಿ ಬೈಂದೂರು ಅಧ್ಯಕ್ಷ ಆನಂದ ಮದ್ದೋಡಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಪಟ್ಟಣ ಪಂಚಾಯತ್ ನಾಮ ನಿರ್ದೇಶಿತ ಸದಸ್ಯ ನಾಗರಾಜ ಶೆಟ್ಟಿ, ಬೈಂದೂರು ರಾಮಕ್ಷತ್ರಿಯ ಸಮಾಜದ ಅಧ್ಯಕ್ಷ ರಾಮಕೃಷ್ಣ ಸಿ,, ಸಮಷ್ಟಿ ಪ್ರತಿಷ್ಟಾನದ ಮ್ಯಾನೇಜಿಂಗ್ ಟ್ರಸ್ಟೀ ಸುನಿಲ್ ಹೆಚ್. ಜಿ. ಬೈಂದೂರು ಉಪಸ್ಥಿತರಿದ್ದರು.
ಸುರಭಿ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಸ್ವಾಗತಿಸಿ, ಸದಸ್ಯೆ ಸುಮನಾ ಮಂಜುನಾಥ್ ವಂದಿಸಿದರು. ರಾಜೇಶ್ ಪಡುವರಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನಕುದ್ರು ಇವರಿಂದ ಚೂಡಾಮಣಿ – ಲಂಕಾದಹನ ಗೊಂಬೆಯಾಟ ಹಾಗೂ ಗೊಂಬೆಯಾಟ ಪ್ರಾತ್ಯಕ್ಷಿಕೆ ನಡೆಯಿತು.