ಕುಂದಾಪುರ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2015ನೇ ಸಾಲಿನ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ ಮತ್ತು ಯುವ ಪುರಸ್ಕಾರಗಳನ್ನು ಪ್ರಕಟಿಸಿದ್ದು ಕುಂದಾಪುರ ತಾಲೂಕಿನ ಉಪ್ಪುಂದದ ಜಾದೂಗಾರ ಹಾಗೂ ಸಾಹಿತಿ ಓಂಗಣೇಶ್ ಅವರಿಗೆ ಭಾಷಾಂತರ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ರಿಜಿಸ್ಟಾರ್ ಡಾ. ನಿ. ದೇವದಾಸ ಪೈ ಮಾಹಿತಿ ನೀಡಿದರು. ಮಾರ್ಚ್ 5ರಂದು ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 6ರಂದು ಭಟ್ಕಳದ ನಾಗಯಕ್ಷೆ ಸಭಾ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಶಿರಸಿಯ ರಾಮಚಂದ್ರ ಎಂ.ಶೇಟ್ (ಸಾಹಿತ್ಯ), ಕಾಸರಗೋಡು ಚಿನ್ನಾ (ಕಲೆ) ಮತ್ತು ತೊಳಸಾಣಿಯ ಆಲೂ ಪೀಲೂ ಮರಾಠಿ (ಜಾನಪದ) ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 50 ಸಾವಿರ ನಗದು ಒಳಗೊಂಡಿದೆ ಎಂದರು.
ಪುಸ್ತಕ ಬಹುಮಾನ ಪ್ರಶಸ್ತಿಗೆ ಓಂ ಗಣೇಶ್ ಉಪ್ಪುಂದ (ಭಾಷಾಂತರ), ರೊನಿ ಅರುಣ್ (ಅಧ್ಯಯನ) ಮತ್ತು ಡೆನಿಸ್ ಕ್ಯಾಸ್ತಲಿನೋ (ಲೇಖನ) ಆಯ್ಕೆಯಾಗಿದ್ದು, ಪ್ರಶಸ್ತಿಯು ೨೫ ಸಾವಿರ ನಗದು ಒಳಗೊಂಡಿದೆ. ಅದೇ ರೀತಿ ಯುವ ಪುರಸ್ಕಾರ ಪ್ರಶಸ್ತಿಗೆ ಶಿರಸಿಯ ಆಂಜಲಿ ವಿಲ್ಸನ್ ವಾಜ್ (ನೃತ್ಯ), ಭಟ್ಕಳದ ನಸ್ರುಲ್ಲಾ ಆಸ್ಕೇರಿ (ಕ್ರೀಡೆ) ಮತ್ತು ರಾಜಾರಾಮ್ ಪ್ರಭು (ಸಂಗೀತ) ಆಯ್ಕೆಯಾಗಿದ್ದಾರೆ ಎಂದು ಹೇಳಿದರು.