ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಂದು ಮಹಿಳೆಯರೂ ಪುರುಷರಿಗೆ ಸರಿಸಾಟಿಯಾಗಿ ನಿಂತಿದ್ದಾರೆ. ಸಮಾಜದ ಯಶಸ್ವೀ ಪುರುಷರ ಹಿಂದೆ ಮಹಿಳಾ ಶ್ರಮವಿರುತ್ತದೆ. ಮಹಿಳೆಯರಿಗೆ ಪೂಜ್ಯ ಸ್ಥಾನವಿದ್ದರೂ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯನ್ನು ಕಡೆಗಣಿಸುವುದು ತರವಲ್ಲ ಎಂದು ಕುಂದಾಪುರ ಫ್ಯಾಶನ್ ಕೋರ್ಟ್ ನಿರ್ದೇಶಕಿ ಶಿಲ್ಪಾ ಕೆ. ಮಧ್ಯಸ್ಥ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ತಾಲೂಕ್ ಒಕ್ಕೂಟ, ಕುಂದಾಪುರ ರೋಟರಿ ಮಿಡ್ ಟೌನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕುಂದಾಪುರ ಮೂಕಾಂಬಿಕಾ ಮಹಿಳಾ ಮಂಡಳಗಳ ಒಕ್ಕೂಟ ಸಭಾಭವನದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಎಲ್ಲರಿಗೂ ಎಲ್ಲಾ ಸಮಯದಲ್ಲೂ ಅವಕಾಶ ಸಿಗೋದಿಲ್ಲ. ಜೀವನದಲ್ಲಿ ಒಮ್ಮೊಮ್ಮೆ ಒಳ್ಳೆಯ ಅವಕಾಶ ಸಿಗುತ್ತಿದ್ದು, ಅದನ್ನು ಬಳಸಿಕೊಂಡು ಎತ್ತರಕ್ಕೆ ಏರಬೇಕು. ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಿರದೆ ಸಮಾಜದ ಎಲ್ಲಾ ಸ್ಥರದ ಮಹಿಳೆಯರು ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಅನುದಿನವೂ ಮಹಿಳೆಯರ ದಿನವನ್ನಾಗಿ ಆಚರಿಸಿದರೆ ಅದಕ್ಕೊಂದು ಅರ್ಥ ಎಂದರು.
[quote font_size=”16″ bgcolor=”#ffffff” bcolor=”#dd9933″ arrow=”yes” align=”right”]* ಮಹಿಳಾ ಮೀಸಲು ಸದುಪಯೋಗ ಪಡಿಸಿ, ನಾಯಕತ್ವ ಗುಣ ಬೆಳಸಿಕೊಂಡು ರಾಜಕೀಯದ ಮೆಟ್ಟಿಲೇರಿ ಪುರುಷರ ಸಮಾನ ನಿಲ್ಲಬೇಕಿದೆ. ಹೆಮ್ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಜೊತೆ ಅವರ ಕಾಲ ಮೇಲೆ ಅವರು ನಿಲ್ಲುವಂತೆ ಮಾಡುವ ಜವಾಬ್ದಾರಿ ಮಹಿಳೆ ಮೇಲಿದೆ. ಹೆಮ್ಮಕ್ಕಳಲ್ಲಿ ಸ್ವಾಭಿಮಾನದ ಬೀಜ ಬಿತ್ತುವ ಜೊತೆ, ಅವರ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಿ. ಹೆಮ್ಮಕ್ಕಳ ರಕ್ಷಣೆ ಬಗ್ಗೆ ನಿರ್ದೇಶನ ನೀಡಿ. ಹೆಣ್ಣು ಅಬಲೆಯಲ್ಲ ಸಭಲೆ ಎನ್ನುವ ಆತ್ಮಸ್ಥೈರ್ಯ ತುಂಬಿದರೆ ಸಮಾಜದಲ್ಲಿ ಮಹಿಳೆ ತಲೆಯೆತ್ತಿ ಬಾಳಲು ಸಾಧ್ಯ.
– ಗಾಯತ್ರಿ ನಾಯಕ್, ತಹಸೀಲ್ದಾರ್, ಕುಂದಾಪುರ.[/quote]
ಜಿಲ್ಲಾ ಒಕ್ಕೂಟ ಅಧ್ಯಕ್ಷೆ ಸರಳಾ ಕಾಂಚನ್, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಅಮರ ಪ್ರಸಾದ್ ಶೆಟ್ಟಿ, ಕುಂದಾಪುರ ರೋಟರಿ ಮಿಡ್ ಟೌನ್ ಅಧ್ಯಕ್ಷ ಮಹೇಶ್ ಬೆಟ್ಟನ್, ಮಾಜಿ ರೋಟರಿ ಸಹಾಯಕ ಗೌರ‍್ನರ್ ಆವರ್ಸೆ ಸುಧಾಕರ ಶೆಟ್ಟಿ, ಕುಂದಾಪುರ ಪುರಸಭೆ ಮಾಜಿ ಅಧ್ಯಕ್ಷೆ ದೇವಕಿ ಸಣ್ಣಯ್ಯ, ತಾಲೂಕ್ ಒಕ್ಕೂಟ ಗೌರವಾಧ್ಯಕ್ಷೆ ಹೇಮಾವತಿ ಎನ್.ಹೆಗ್ಡೆ, ಕಾರ‍್ಯದರ್ಶಿ ಜಯಂತಿ ಎನ್.ಐತಾಳ್, ಸಿಡಿಪಿಓ ಅಧಿಕಾರಿ ಶೋಭಾ ನಾಡಕರ್ಣಿ ಇದ್ದರು.
ಇದೇ ಸಂದರ್ಭದಲ್ಲಿ ಕುಂದಾಪುರ ತಹಸೀಲ್ದಾರ್ ಗಾಯತ್ರಿ ಎನ್. ನಾಯ್ಕ್ ಅವರನ್ನು ಒಕ್ಕೂಟದ ಪರವಾಗಿ ಸನ್ಮಾನಿಸಲಾಯಿತು. ಕುಂದಾಪುರ ರಿಕ್ಷಾ ಚಾಲಕಿ ರೂಪ ಅವರನ್ನು ಗೌರವಿಸಲಾಯಿತು.
ಕುಂದಾಪುರ ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ತಾಲೂಕ್ ಒಕ್ಕೂಟ ಅಧ್ಯಕ್ಷೆ ರಾಧಾ ದಾಸ್ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಅಶ್ವನಿ ಪ್ರಾರ್ಥಿಸಿದರು. ಕಳಂಜೆ ಶುಭ್ರ ಮಹಿಳಾ ಮಂಡಳಿ ಸದಸ್ಯರಿಂದ ಸ್ವಾಗತ ನೃತ್ಯ ನಡೆಯಿತು. ಪ್ರೇಮ ಸನ್ಮಾನಪತ್ರ ವಾಚಿಸಿದರು. ಮಾರಿಯಾ ಡಿಸೋಜಾ ನಿರೂಪಿಸಿದರು. ಸುಗುಣಾ ತೆಕ್ಕಟ್ಟೆ ವಂದಿಸಿದರು.