ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಹಾವು ಕಚ್ಚಿದ್ದಕ್ಕೆ ಮದ್ದಿಲ್ಲ. ನಾಯಿಕಡಿತಕ್ಕೂ ಚುಚ್ಚು ಮದ್ದಿಲ್ಲ. ಗ್ರಾಮೀಣ ಭಾಗದ ಆರೋಗ್ಯ ಕೇಂದ್ರದಲ್ಲಿ ಔಷಧವಿಲ್ಲ. ಇಲಾಖೆಗೆ ಔಷಧ ಕೊರತೆಯಿದೆಯಾ. ಹಾಗಿದ್ದರೆ ನನ್ನ ಗಮನಕ್ಕೆ ಏಕೆ ತಂದಿಲ್ಲ. ಬಡವರಿಗೆ ಸಿಗೋ ಸೌಲಭ್ಯ ವಂಚನೆಯಾದರೆ ಕ್ಷಮಿಸೋದಿಲ್ಲ. ಹೀಗೆ ಖಡಕ್ಕಾಗಿ ಎಚ್ಚರಿಸಿದವರು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ.
ಕುಂದಾಪುರ ತಾಲೂಕ್ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಗಂಗೊಳ್ಳಿ ಆರೋಗ್ಯ ಕೇಂದ್ರದಲ್ಲಿ ಹಾವು ಕಚ್ಚಿದಕ್ಕೆ ಔಷಧ ಸಿಗುತ್ತಿಲ್ಲ ಎಂದು ಜನ ಕಂಪ್ಲೇಂಟ್ ಮಾಡುತ್ತಿದ್ದಾರೆ. ಏಕೀಗೆ ಎಂದು ಪ್ರಶ್ನಿಸಿದರು.
ಎಲ್ಲಾ ಆಸ್ಪತ್ರೆಗಳಲ್ಲೂ ಸಮಿತಿ ರಚಿಸಿ, ಕ್ರಮಬದ್ಧವಾಗಿ ಸಭೆ ನಡೆಸಿದ್ದೀರಾ. ಏನಾದರೂ ಕೊರತೆಯಿದ್ದರೆ ಗಮನಕ್ಕೆ ತನ್ನಿ. ಬಡವರ ವಿಷಯದಲ್ಲಿ ರಾಜಿಯಿಲ್ಲ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಕೆಲಸ ಮಾಡಿ, ಕೆಲಸ ಮಾಡಲು ಮನಸ್ಸಿಲ್ಲದಿದ್ದರೆ ಮನೆಗೆ ಹೋಗಿ ಎಂದವರು ವಾರ್ನಿಂಗ್ ಮಾಡಿದರು.
ಹಿಂದೆ ಆರೋಗ್ಯ ಇಲಾಖೆ ೨.೫ಲಕ್ಷ ರೂ. ಔಷಧಿ ವಿಕ್ರಯಕ್ಕೆ ಲಿಮಿಟ್ ಹಾಕಿದ್ದು, ಈಗ ೫ ಲಕ್ಷದ ವರೆಗೆ ಔಷಧಿ ಖರೀದಿ ಮಾಡಬಹುದು. ಅತ್ಯಾವಶ್ಯಕ ೩೫೦ ಔಷಧಗಳ ಲಿಸ್ಟ್ ಮಾಡಿ ಕೊಟ್ಟಿದ್ದು, ಕೆಲವೊಂದು ಔಷಧಗಳಿಗೆ ಬೆಲೆ ಪಿಕ್ಸ್ ಆಗದೆ ಟೆಂಡರ್ ಆಗದಿರುವುದು ಸಮಸ್ಯೆ ಆಗಿದೆ. ಆದರೂ ಕೊರತೆ ಸರಿದೂಗಿಸಲಾಗುತ್ತಿದೆ ಎಂದು ಕುಂದಾಪುರ ಸಾರ್ವಜನಿಕಮ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಉದಯಶಂಕರ್ ತಿಳಿಸಿದರು.
ಕಾಡುತ್ಪತ್ತಿ ಸಂಗ್ರಹದಲ್ಲಿ ನೀವೂ ಶ್ಯಾಮೀಲಾ?
ಕಾಡುತ್ಪತ್ತಿ ಅತಿಕ್ರಮ ಸಂಗ್ರಹ ವಾಗುತ್ತಿದ್ದು ನನ್ನ ಗಮನಕ್ಕೆ ಬಂದಿದೆ. ಎಲ್ಲೆಲ್ಲಿ ಸ್ಟಾಕ್ ಮಾಡಿದ್ದಾರೆ ಎನ್ನೋದನ್ನು ರಿಕಾರ್ಡ್ ಮಾಡಿದ್ದು ಸಾಕ್ಷಿ ನಿಮಗೆ ತೋರಿಸಿಬೇಕಾ. ಕಾಡುತ್ಪತ್ತಿ ಸಂಗ್ರಹಕರ ಜೊತೆ ಅರಣ್ಯ ಇಲಾಖೆ ಅಧಿಕಾರಿಗಳು ಶ್ಯಾಮೀಲಾಗಿದ್ದೀರಾ? ಅವರ ಬಗ್ಗೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಾಸಕರು ಪ್ರಶ್ನಿಸಿದರು.
ಕಾಡುತ್ಪತ್ತ ಸಂಗ್ರಹದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅತಿಕ್ರಮ ಸಂಗ್ರಹಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿ ಉತ್ತರಿಸಿದರು. ಬಹುಗ್ರಾಮ ಕುಡಿಯುವ ನೀರು ಯೋಜನೆ ನಾಡಾ, ಚಿತ್ತೂರ,ಯಡ್ತರೆ ಗ್ರಾಮದಲ್ಲಿ ಆರಂಭವಾಗಿದ್ದು, ಅಮಾಸೆಬೈಲು ಬಹುಗ್ರಾಮ ಕುಡಿಯುವ ಯೋಜನೆಗೆ ತ್ವರಿತ ಚಾಲನೆ ನೀಡಿ ಎಂದ ಶಾಸಕರು, ವಾರಾಹಿ ನೀರು ಬಳಸಿ ಸಿದ್ದಾಪುರ ಶಂಕರನಾರಾಯಣ ಗ್ರಾಮಕ್ಕೆ ಕುಡಿಯುವ ನೀರು ಯೋಜನೆ ರೂಪಿಸಿ ಎಂದು ಸಲಹೆ ಮಾಡಿದರು.
ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆ ಇರುವ ಪ್ರದೇಶಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿ. ಕುಡಿಯುವ ನೀರು ಪೂರೈಕೆಗೆ ವಿದ್ಯುತ್ ಸಮಸ್ಯೆ ಆಗದಂತೆ ನೋಡಿಕೊಳ್ಳಿ, ಕುಡಿಯುವ ನೀರು ಸಮಸ್ಯೆ ತಾತ್ಸಾರ ಮಾಡಿದರೆ ಕ್ಷಮಿಸೋದಿಲ್ಲ. ಈ ಬಗ್ಗೆ ರಾಜಿಯಿಲ್ಲ ಎಂದು ಹೇಳಿದರು. ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಹಸೀಲ್ದಾರ್ ಗಾಯತ್ರಿ ಎನ್.ನಾಯ್ಕ್, ಕುಂದಾಪುರ ತಾಪಂ ಸಿಇಓ ನಾರಾಯಣ ಸ್ವಾಮಿ ಇದ್ದರು.