ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾರಣ ಕೇಳಿದರೆ ಸಬೂಬು ಹೇಳುತ್ತೀರಿ. ಜನರು ಪ್ರಶ್ನಿಸಿದರೇ ಹಾರಿಕೆಯ ಉತ್ತರ ನೀಡುತ್ತೀರಿ. ನೀವು ಅಧಿಕಾರಿಗಳು ಇಲ್ಲಿ ತುಘಲಕ್ ದರ್ಬಾರ್ ಮಾಡತ್ತಿದ್ದೀರಾ? ಹೀಗೇಂದು ಕುಂದಾಪುರ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡದ್ದು ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ.
ಕುಮ್ಕಿ ಭೂಮಿ ಗೊಂದಲ ಸಾಕಷ್ಟು ವರ್ಷದಿಂದಲೇ ಇದೆ. ಈಗ ಹಕ್ಕಪತ್ರ ನೀಡಲು ಅಡೆತಡೆ ಇಲ್ಲದಿದ್ದರೂ 16ವರ್ಷದಿಂದ ಬಾಕಿ ಇರುವ ಅರ್ಜಿಗಳು ವಿಲೇವಾರಿಯಾಗಬೇಕಿದೆ. ಹಾಗಾಗಿ ಹಕ್ಕುಪತ್ರ ನೀಡಲು ತಡವಾಗುತ್ತಿದೆ ಎಂದು ಸಚಿವರ ಪ್ರಶ್ನೆಗೆ ಉತ್ತರಿಸುತ್ತಿದ್ದ ತಹಶೀಲ್ದಾರ್ ಅವರಿಗೆ ಎಂಎಲ್‌ಸಿ ಅವರು ಪ್ರಶ್ನೆಯ ಮೇಲೆ ಪ್ರಶ್ನೆಯನ್ನು ಕೇಳಿ ಸುಸ್ತು ಹೊಡೆಸಿದರು.
ಕುಮ್ಕಿ ಭೂಮಿಯನ್ನು ಫಲಾನುಭವಿಗಳಿಗೆ ನೀಡಲು ಹೈಕೋರ್ಟ್‌ನಲ್ಲಿದ್ದ ತಡೆಯಾಜ್ಞೆ ತೆರವುಗೊಂಡಿದೆ. ಕೆಲವು ದಿನಗಳ ಹಿಂದೆಯೇ ಕುಂದಾಪುರ ತಾಲೂಕಿನ ೧೬೦೦ ಮಂದಿಗೆ ಮೊದಲ ಹಂತದಲ್ಲಿ ಹಕ್ಕುಪತ್ರ ನೀಡಲು ಅವಕಾಶವಿದ್ದರೂ ಈವರೆಗೆ ನೀಡಿಲ್ಲ. ಸಮಿತಿಯ ಕಾರ್ಯದರ್ಶಿಯಾಗಿ ಈ ವಿಚಾರವನ್ನು ಸಮಿತಿಯ ಮುಂದಿಡಬೇಕು ಎಂಬ ಪ್ರಜ್ಞೆಯೂ ತಮಗಿಲ್ಲವೇ? ತಮಲ್ಲಿಯೇ ಲೋಪ ಇಟ್ಟುಕೊಂಡು ಜವಾಬ್ದಾರಿಯನ್ನು ಮರೆತು ಮಾತನಾಡಬೇಡಿ. ಶೀಘ್ರ ಹಕ್ಕುಪತ್ರ ನೀಡಲು ತಯಾರಿ ಮಾಡಿ ಎಂದವರು ತಾಕೀತು ಮಾಡಿದರು.