ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಮಂಗಳೂರು ವಿವಿ ಪದವಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಅಂಕಪಟ್ಟಿಯು ಹಲವಾರು ಲೋಪಗಳಿಂದ ಕೂಡಿದ್ದು, ಉತ್ತರ ಪತ್ರಿಕೆಯನ್ನು ಮರುಮೌಲ್ಯಮಾಪನ ಹಾಗೂ ಇನ್ನಿತರ ಗೊಂದಲಗಳನ್ನು ನಿವಾರಿಸಬೇಕೆಂದು ಆಗ್ರಹಿಸಿ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಅಂಕದಕಟ್ಟೆ ಮಾತನಾಡಿ ೧, ೩ ಮತ್ತು ೫ನೇ ಸೆಮಿಸ್ಟರ್‌ನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಹಲವಾರು ತಪ್ಪುಗಳು ಕಂಡುಬಂದಿದೆ. ಅಂಕಪಟ್ಟಿಯಲ್ಲಿ ಹೆಚ್ಚಿನ ಅಂಕ ಇದ್ದರೂ ಕೊನೆಯಲ್ಲಿ ಅನುತ್ತೀರ್ಣವೆಂದು ನಮೂದಿಸಲಾಗಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಎಂದು ಪರಿಗಣಿಸಲಾಗಿದ್ದು, ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ ಉತ್ತೀರ್ಣವೆಂಬ ಫಲಿತಾಂಶ ಬಂದಿದೆ. ವಿಶಿಷ್ಟ ದರ್ಜೆಯಲ್ಲಿ ಪಡೆಯುವ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ಆತಂಕ ತಂದೊಡ್ಡಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ
ಕರ್ನಾಟಕದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಂಗಳೂರು ವಿವಿಗೆ ಅಪಾರ ಗೌರವಿದ್ದು, ತನ್ನದೇ ಆದ ವಿಶಿಷ್ಟ ಸ್ಥಾನಮಾನವಿದೆ. ಆದರೆ ಈ ಭಾರಿ ಪರೀಕ್ಷೆ ನಡೆದು ಎರಡು ತಿಂಗಳುಗಳಾದರೂ ಫಲಿತಾಂಶ ಪ್ರಕಟಿಸದೇ ವಿಳಂಬ ಮಾಡಿರುವುದಲ್ಲದೇ ಹತ್ತಾರು ಲೋಪದೋಷಗಳನ್ನು ಫಲಿತಾಂಶದಲ್ಲಿ ಕಾಣಿಸಿಕೊಂಡಿದೆ. ಈ ಗೊಂದಲಮಯ ಫಲಿತಾಂಶವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ನ್ಯಾಯಕ್ಕಾಗಿ ತೀವೃ ಸ್ವರೂಪದ ಹೋರಾಟಕ್ಕೆ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮುಂದಾಗಲಿದ್ದಾರೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ
ಡಾ. ಬಿಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಿಂದ ಹೊರಟ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುತ್ತಾ ಮಿನಿ ವಿಧಾನಸೌಧ ತಲುಪಿ ಪ್ರತಿಭಟನೆ ನಡೆಸಿದರು. ಬಳಿಕ ಉಪತಹಶೀಲ್ದಾರ್ ರಾಮಚಂದ್ರ ರಾವ್ ಅವರಿಗೆ ಮನವಿ ಸಲ್ಲಿಸಲಾಯಿತು. ಎಬಿವಿಪಿ ಕುಂದಾಪುರ ನಗರ ಸಹಕಾರ್ಯದರ್ಶಿ ವೈಭವ್, ಮುಂದಾಳುಗಳಾದ ರಕ್ಷೀತ್, ಅನೀಶ್, ಸಚಿನ್, ಪುನಿತ್, ನವೀನ್, ಸುಹಾಸ್, ನಯನಾ, ಸ್ವಾಗತ್, ನಿತೀನ್ ಮೊದಲಾದದದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.