ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಡಾ.ಹೆಚ್. ಶಾಂತಾರಾಮ್ ಅವರು ಮಣಿಪಾಲ ಅಕಾಡೆಮಿಯ ಆಡಳಿತಾಧಿಕಾರಿಗಳು. ಶಿಕ್ಷಣ, ಸಾಹಿತ್ಯ, ಸಂಸ್ಕೃತಿಗಳಲ್ಲಿ ಅಪಾರ ಆಸಕ್ತಿ ಉಳ್ಳವರು. ಜೊತೆಗೆ ಕ್ರಿಯಾಶೀಲ ವ್ಯಕ್ತಿಗಳನ್ನು, ಸೃಜನಶೀಲ ಮನಸ್ಸುಗಳನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬಂದವರು. ಉಡುಪಿ – ಮಣಿಪಾಲ – ಕುಂದಾಪುರ ಪರಿಸರವನ್ನು ಸಾಹಿತ್ಯಿಕ ಚಟುವಟಿಕೆ, ನಾಟಕ, ಯಕ್ಷಗಾನ ಪ್ರಯೋಗ ಪ್ರದರ್ಶನಗಳ ಮೂಲಕ ಸಾಂಸ್ಕೃತಿಕವಾಗಿ ಗಟ್ಟಿಗೊಳ್ಳುವಂತೆ ಮಾಡುವಲ್ಲಿ ಅವರ ಕೊಡುಗೆ ಅನಾದೃಶ್ಯವಾದುದು. ಅವರ ಹೆಸರಿನಲ್ಲಿ ಭಂಡಾರ್ಕಾರ್ಸ್ ಕಾಲೇಜು ಪ್ರತಿವರ್ಷ ಅತ್ಯುತ್ತಮ ಕೃತಿಯೊಂದಕ್ಕೆ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.
ಈ ವರ್ಷ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಗೆ ೨೦೧೪ ಮತ್ತು ೨೦೧೫ ರಲ್ಲಿ ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಕಾದಂಬರಿಯನ್ನು ಆಹ್ವಾನಿಸಲಾಗಿದೆ. ಕಾದಂಬರಿಯ ನಾಲ್ಕು ಪ್ರತಿಗಳನ್ನು ಎಪ್ರಿಲ್ ೩೦ರ ಒಳಗೆ ಸಾಹಿತ್ಯ ಪ್ರಶಸ್ತಿ ಸಮಿತಿ, ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ ೫೭೬೨೦೧, ಉಡುಪಿ ಜಿಲ್ಲೆ ಈ ವಿಳಾಸಕ್ಕೆ ಕಳುಹಿಸುವಂತೆ ಕೋರಲಾಗಿದೆ. ಪ್ರಶಸ್ತಿಯ ಮೊತ್ತ ಹದಿನೈದು ಸಾವಿರ ರೂಪಾಯಿಗಳು ಮತ್ತು ಬೆಳ್ಳಿಯ ಫಲಕ. ಆಗಸ್ಟ್ ಹದಿಮೂರರಂದು ಕಾಲೇಜಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ೦೮೨೫೪-೨೩೦೩೬೯ ಅಥವಾ ೯೪೪೯೨೫೭೨೬೩ ಈ ನಂಬರುಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.