ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕುಂದಾಪುರ ಹೊಸ ಬಸ್ ನಿಲ್ದಾಣ ಪ್ರವೇಶಿಸಿದ ಬಸ್ಸನ್ನು ಯಾವುದೇ ಸೂಚನೆ ನೀಡದೇ ಚಾಲಕ ಹಿಮ್ಮುಖವಾಗಿ ಚಲಾಯಿಸಿದ ಕಾರಣ ಪ್ರಯಾಣಿಕ ಪಾದದ ಮೇಲೆ ಹಾದು ಹೋದ ಘಟನೆ ನಡೆದಿದೆ. ಖಾಸಗಿ ಸಂಸ್ಥೆಯೊಂದಕ್ಕೆ ಸೇರಿದ ಬಸ್ ನಿರ್ವಾಹಕನಿಲ್ಲದಿರುವಾಗ ಹಿಮ್ಮುಖವಾಗಿ ಚಲಾಯಿಸಿದ್ದರಿಂದ ಈ ಅವಘಡ ಸಂಭವಿಸಿದೆ.
ಬಸ್ಸನ್ನು ರಭಸವಾಗಿ ನಿಲ್ದಾಣದೊಳಕ್ಕೆ ಚಲಾಯಿಸಿಕೊಂಡು ಬಂದ ಚಾಲ್ಲಕ ಅದೇ ವೇಗದಲ್ಲಿ ಹಿಂಬದಿಗೆ ರಿವರ್ಸ್ ತೆಗೆದು ಕೊಂಡಿದ್ದಾನೆ. ಈ ಸಂದರ್ಭದಲ್ಲಿ ಬಸ್ಸಿಗೆ ಕಾಯುತ್ತಿದ್ದ ಮುದೂರು ಮೂಲದ ಯುವಕನ ಪಾದದ ಮೇಲೆ ಬಸ್ಸಿನ ಮುಂದಿನ ಚಕ್ರ ಹರಿದು ಹೋಗಿವೆ. ಯುವಕನ ಆಕ್ರಂದನಕ್ಕೆ ಬೆಚ್ಚಿದ ಚಾಲಕ ತನ್ನ ಎಡವಟ್ಟನ್ನು ಅರಿತು ಬಸ್ಸನ್ನು ಪುನ: ಮುಂದಕ್ಕೆ ಚಲಾಯಿಸಿದ್ದಾನೆ. ಅಷ್ಟರಲ್ಲಾಗಲೇ ಯುವಕನ ಪಾದವೆನ್ನುವುದು ಸಂಪೂರ್ಣವಾಗಿ ಜಜ್ಜಿ ಹೋಗಿ ನೆತ್ತರು ಚಿಮ್ಮಲಾರಂಭಿಸಿದೆ. ಯುವಕನ ಬೊಬ್ಬೆಗೆ ಕೂಡಲೇ ಸೇರಿದ ಪ್ರಯಾಣಿಕರು ಹಾಗೂ ಅಂಗಡಿಯವರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ
ಚಾಲಕರ ಬಗ್ಗೆ ಆಕ್ರೋಶ: ನಿಲ್ದಾಣದೊಳಕ್ಕೆ ಪ್ರವೇಶಿಸುತ್ತಿದ್ದ ಹಾಗೆ ಯಮವೇಗದಿಂದ ಬಸ್ಸುಗಳನ್ನು ಚಲಾಯಿಸಿಕೊಂಡು ಬರುವ ಕೆಲವು ಚಾಲಕರ ವಿರುದ್ಧ ಪ್ರಯಾಣಿಕರು ಹಾಗೂ ಸ್ಥಳೀಯ ವ್ಯಾಪಾರಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನಿರ್ವಾಹಕನನ್ನು ಅದೆಲ್ಲಿಯೋ ಇಳಿಸಿ ಏಕಾಂಗಿಯಾಗಿಯೇ ಬಸ್ಸನ್ನು ಚಲಾಯಿಸಿಕೊಂಡು ಬರುವ ಚಾಲಕರು(ಕೆಲವೊಮ್ಮೆ ನಿರ್ವಾಹಕರು) ಅದೇ ವೇಗದಲ್ಲಿ ಅಂದಾಜಿನ ಮೇರೆಗೆ ರಿವರ್ಸ್ ತೆಗೆದು ಕೊಳ್ಳತ್ತಾರೆ. ಅದಲ್ಲದೇ ಮುಂದಿನ ಟ್ರಿಪ್ ಗೆ ಸಾಕಷ್ಟು ಸಮಯವಿದ್ದರೂ ಇಕ್ಕಟ್ಟಿನ ನಡುವೆಯೇ ಬಸ್ಸನ್ನು ತೂರಿಸಿ ಇತರ ಬಸ್ಸುಗಳಿಗೆ ಸಮಸ್ಯೆಯನ್ನುಂಟು ಮಾಡುತ್ತಾರೆ ಎಂಬ ಆರೋಪಗಳು ಇಲ್ಲಿ ಕೇಳಿ ಬರುತ್ತಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ