ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿಗೆ ಸಮೀಪದ ಕೂಸಳ್ಳಿ ಫಾಲ್ಸ್‌ಗೆ ಟ್ರಕ್ಕಿಂಗ್‌ಗೆಂದು ತೆರಳಿದ್ದ ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ. ಮೃತ ವಿದ್ಯಾರ್ಥಿಯನ್ನು ಕಾಲೇಜಿನ ಅಂತಿಮ ಬಿಸಿಎ ಪ್ರಸಾದ್ ಅಮೀನ್ (22) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಉಡುಪಿಯ ಎಂಜಿಎಂ ಕಾಲೇಜಿನ ಸುಮಾರು 110 ಮಂದಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ತಂಡ ಪ್ರತಿವರ್ಷದಂತೆ ಈ ವರ್ಷವೂ ಬೈಂದೂರು ಸಮೀಪದ ತೂದಳ್ಳಿಯಲ್ಲಿರುವ ಕೂಸಳ್ಳಿ ಫಾಲ್ಸ್‌ಗೆ ತೆರಳಿದ್ದರು. ಈ ಸಂದರ್ಭ ಜಲಪಾತದ ಮೊದಲ ಸ್ಥರದಲ್ಲಿ ಈಜುತ್ತಿದ್ದ ವಿದ್ಯಾರ್ಥಿಗಳ ಪೈಕಿ ಪ್ರಸಾದ್ ಇದ್ದಕ್ಕಿದ್ದಂತೆ ನೀರಿನಲ್ಲಿ ಮುಳುಗಲಾರಂಭಿಸಿದ. ಆತನನ್ನು ರಕ್ಷಿಸಲು ಗೆಳೆಯರು ಹರಸಾಹಸ ಪಟ್ಟರೂ ಕೊನೆಗೂ ಹಿಡಿತ ತಪ್ಪಿ ಪ್ರಸಾದ್ ನೀರಿನಲ್ಲಿ ಬಂಡೆಯ ಅಡಿಯಲ್ಲಿ ಸಿಲುಕಿ ಮೃತಪಟ್ಟನೆನ್ನಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಆತನನ್ನು ರಕ್ಷಿಸಲು ಕೊನೆ ಕ್ಷಣದವರೆಗೂ ಪ್ರಯತ್ನ ನಡೆಸಿದರೂ ಬಂಡೆಯ ನಡುವೆ ಕಂದಕವಿದ್ದುದರಿಂದ ಸಾಧ್ಯವಾಗಲಿಲ್ಲ. ಮುಳಗುತ್ತಿದ್ದ ಇನ್ನೊರ್ವ ವಿದ್ಯಾರ್ಥಿಯನ್ನು ರಕ್ಷಿಸಲಾಗಿದೆ.ದಾಪ್ರ ಡಾಟ್ ಕಾಂ ಸುದ್ದಿ.
ಟ್ರಕ್ಕಿಂಗ್‌ಗೆ ಬಂದಿದ್ದ ಇತರ ವಿದ್ಯಾರ್ಥಿಗಳನ್ನು ಉಡುಪಿಗೆ ಮರಳಿ ಕಳುಹಿಸಲಾಗಿದೆ. ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಈ ಘಟನೆ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸ್ಥಳಿಯರ ನೆರವಿನೊಂದಿಗೆ ಸಂಜೆಯ ವೇಳೆಗೆ ಪೊಲೀಸರು ಶವವನ್ನು ಪತ್ತೆಮಾಡಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ. ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಪ್ರಸಾದ್ ಉದ್ಯಾವರದ ಇಂಡಬೈಲು ಗ್ರಾಮದವನಾಗಿದ್ದು ತಂದೆ ಕಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ತಾಯಿ ಸುಮತಿ ಅಮೀನ್ ಹಾಗೂ ಓರ್ವ ಸಹೋದರ ಸಂದೀಪ್ ಅವರೊಂದಿಗೆ ವಾಸವಾಗಿದ್ದ. ಇನ್ನೊರ್ವ ಸಹೋದರ ದುಬೈಯಲ್ಲಿ ಕೆಲಸದಲ್ಲಿದ್ದಾನೆ.