ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮಾಜದ ಪ್ರತಿಯೊಬ್ಬರನ್ನೂ ಮುಖ್ಯವಾಹಿನಿಗೆ ತಂದು ಸಾಮಾಜಿಕ ನ್ಯಾಯವನ್ನು ಒದಗಿಸಬೇಕೆಂಬ ಡಾ. ಬಿ.ಆರ್. ಅಂಬೇಡ್ಕರ್ ಎಂಬ ಮಾನವತಾವಾದಿಯ ದೂರದೃಷ್ಠಿಯ ಚಿಂತನೆ ಇಂದು ಅದೆಷ್ಟೋ ಹಿಂದುಳಿದವರಿಗೆ ಬೆಳಕು ನೀಡಿದೆ ಎಂದು ಬೈಂದೂರು ಕ್ಷೇತ್ರ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಡಾ| ಬಿ.ಆರ್ ಅಂಬೇಡ್ಕರ್ ಸಂಘ ಹಾಗೂ ಡಾ| ಬಿ.ಆರ್ ಅಂಬೇಡ್ಕರ್ ಮಹಿಳಾ ಸಂಘದ ೨೧ನೇ ವಾರ್ಷಿಕೋತ್ಸವ ಹಾಗೂ ೧೨೫ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಅಂಬೇಡ್ಕರ್ ದೇಶದ ಧೀಮಂತ ನಾಯಕರಾಗಿ ದಲಿತರು, ಹಿಂದುಳಿದ ವರ್ಗವರಿಗೆ ಸಾಮಾಜಿಕ ನ್ಯಾಯವನ್ನು ತಂದುಕೊಡುವ ಕೆಲಸವನ್ನು ಮಾಡಿದ್ದಾರೆ. ಅವರ ಗುಣವನ್ನು ಮೈಗೂಡಿಸಿಕೊಂಡು ಅವರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಾಕಾರಗೊಳ್ಳಲು ಸಾಧ್ಯ ಎಂದರು.
ಯಡ್ತರೆ ಗ್ರಾಪಂ ಅಧ್ಯಕ್ಷ ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ರತ್ತೂಬಾ ಜನತಾ ಹೈಸ್ಕೂಲ್ ಅಧ್ಯಾಪಕ ಮಂಜು ಕಾಳವಾರ, ಎಸ್‌ಡಿಸಿಸಿ ಬ್ಯಾಂಕಿನ ಶಿವರಾಮ ಪೂಜಾರಿ ಉಪಸ್ಥಿತರಿದ್ದರು.
ಗುಜ್ಜಾಡಿ ಶ್ರೀ ಸಂಗಮೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪಾಂಡುರಂಗ ಕೆ. ಅವರನ್ನು ಸನ್ಮಾನಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ವಿವಿಧ ಸ್ವರ್ಧೆಗಳ ವಿಜೇತರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಡಾ| ಬಿ.ಆರ್ ಅಂಬೇಡ್ಕರ್ ಸಂಘ ಅಧ್ಯಕ್ಷ ಲಕ್ಷ್ಮಣ ಯಡ್ತರೆ ಸ್ವಾಗತಿಸಿದರು. ಡಾ| ಬಿ.ರ್. ಅಂಬೇಡ್ಕರ್ ಮಹಿಳಾ ಸಂಘದ ಅಧ್ಯಕ್ಷ ಗೀತಾ ಸುರೇಶ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಚೈತ್ರಾ ಯಡ್ತರೆ ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಪಿ. ದಯಾನಂದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

















