ಕುಂದಾಪುರ ಕ್ರೀಡೋತ್ಸವ-2016 ಉದ್ಘಾಟನೆ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕ್ರೀಡಾ ಮನೋಭಾವ ಹೊಂದಿರುವ ವ್ಯಕ್ತಿ ಬದುಕಿನಲ್ಲಿ ಸುಲಭವಾಗಿ ಸೋಲದೇ ಗೆಲುವಿವನ್ನೇ ಅಪೇಕ್ಷಿಸುವರು. ಸೋತಾಗ ಧೃತಿಗೆಡದೇ, ಗೆದ್ದಾಗ ಹಿಗ್ಗದೇ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಮುನ್ನಡೆಯುವ ಜಾಗೃತಾ ಸ್ಥಿತಿ ಕ್ರೀಡಾಪಟುವಿನಲ್ಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಜರುಗಿದ ಬಂಟರ ಕ್ರೀಡೋತ್ಸವ-2016 ಚಾಲನೆ ನೀಡಿ ಮಾತನಾಡಿದರು. ಬಂಟ ಸಮುದಾಯ ಕೃಷಿ ಪ್ರಧಾನ ವ್ಯವಸ್ಥೆಯಲ್ಲಿ ಬಾಳಿಬದುಕಿದ್ದರೂ ಕಾಲಾಂತರದಲ್ಲಿ ವಿವಿಧ ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ತೊಡಗಿಸಿಕೊಂಡಿದೆ. ಆದಾಗ್ಯೂ ಕೃಷಿ ಸಂಸ್ಕೃತಿ ಹಾಗೂ ಹೋರಾಟ ಮನೋಭಾವವನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ವಿಶಾಲವಾದ ಕ್ರೀಡಾ ಮನೋಭಾವ, ಮನೋಧರ್ಮ ಹಾಗೂ ಧರ್ಮವನ್ನು ಮುಂದಿಟ್ಟುಕೊಂಡು, ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿ ಯುವ ಸಮುದಾಯ ಜಾಗೃತಿಯಿಂದ ಹೆಜ್ಜೆಯಿಡಬೇಕಿದೆ ಎಂದರು.
ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಸುಕೇಶ್ ಶೆಟ್ಟಿ ಹೊಸಮಠ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಕುಂದಾಪುರ ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ಸಂಪಿಗೇಡಿ ಸಂಜೀವ ಶೆಟ್ಟಿ, ಹುಬ್ಬಳ್ಳಿ ಧಾರಾವಾಡ ಬಂಟರ ಸಂಘದ ಅಧ್ಯಕ್ಷ ಎನ್. ಅಶೋಕ್ ಶೆಟ್ಟಿ, ಕೋಟೇಶ್ವರ ಯುವಮೆರಿಡಿಯನ್ ಆಡಳಿತ ನಿರ್ದೇಶಕ ವಿನಯಕುಮಾರ್ ಶೆಟ್ಟಿ, ಜಿ.ಪಂ ಸದಸ್ಯರುಗಳಾದ ಬಾಬು ಶೆಟ್ಟಿ, ತಾರನಾಥ ಶೆಟ್ಟಿ, ಶ್ರೀಲತಾ ಶೆಟ್ಟಿ, ಬಂಟ್ ಸೋಲಾರ್ ಇಂಡಿಯಾ ನಿರ್ದೇಶಕ ಚಂದ್ರಶೇಖರ ಶೆಟ್ಟಿ, ಅಂತರಾಷ್ಟ್ರೀಯ ಕ್ರೀಡಾಪಟು ಕಾಪು ಪ್ರೇಮಾನಂದ ಶೆಟ್ಟಿ, ಉದ್ಯಮಿಗಳಾದ ಉದ್ಯಮಿ ಉಪೇಂದ್ರ ಶೆಟ್ಟಿ, ಆನಂದ ಶೆಟ್ಟಿ, ಕರುಣಾಕರ ಹೆಗ್ಡೆ ಆನಗಳ್ಳಿ, ಕೆ.ಟಿ. ಶಂಕರ ಶೆಟ್ಟಿ, ವಿಜಯಾನಂದ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಕುಂದಾಪುರ ಬಂಟರ ಸಂಘದ ಗೌರವಾಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ, ಕೋಶಾಧಿಕಾರಿ ಮನೋರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅವಿನಾರ್ ರೈ, ಕ್ರೀಡಾ ಸಂಚಾಲಕ ರಾಜಾರಾಮ ಶೆಟ್ಟಿ ಹೈಕಾಡಿ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರ ತಾಲೂಕಿನ ನೂತನ ಜಿಪಂ ಹಾಗೂ ತಾಪಂ ಬಂಟ ಸದಸ್ಯರನ್ನು ಸನ್ಮಾನಿಸಲಾಯಿತು. ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಆಶಯ ಭಾಷಣ ಮಾಡಿದರು. ಬಂಟರ ಸಂಘದ ಅಧ್ಯಕ್ಷ ಸುಕೇಶ್ ಶೆಟ್ಟಿ ಸ್ವಾಗತಿಸಿದರು.