ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜು ಮತ್ತು ಜೆಸಿಐ ಕುಂದಾಪುರ ಇವರ ಸಹಭಾಗಿತ್ವದೊಂದಿಗೆ ಕಾಲೇಜಿನ ಎಸ್.ಪಿ.ತೋಳಾರ್ ಒಳಾಂಗಣ ಕ್ರೀಡಾಂಗಣದಲ್ಲಿ ಶಟ್ಲ ಬ್ಯಾಡ್‌ಮಿಂಟನ್ ಕ್ರೀಡೆಯಲ್ಲಿ 15 ದಿವಸಗಳ ಬೇಸಿಗೆ ತರಬೇತಿ ಶಿಬಿರ ಆರಂಭಗೊಂಡಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಜೆಸಿಐ ಕುಂದಾಪುರದ ಅಧ್ಯಕ್ಷ ಜೆಸಿ ವಿಷ್ಣು.ಕೆ.ಬಿ. ಅವರು ಶಿಬಿರದ ಪ್ರಯೋಜನವನ್ನು ಪಡೆದು ಉತ್ತಮ ಆಟಗಾರರಾಗುವಂತೆ ಶುಭ ಹಾರೈಸಿದರು. ಜ್ಯೂನೀಯರ್ ರಾಷ್ಟ್ರಮಟ್ಟದ ಆಟಗಾರ ಭಂಡಾರ್ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ವಿಮಲೇಶ್ ಶೇಟ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಮಾತನಾಡಿ, ಟಿ.ವಿ., ಮೊಬೈಲ್ ಮತ್ತು ಅಂತರ್ಜಾಲಗಳಿಂದ ವಿಮುಖರಾಗಿ ರಜೆಯಲ್ಲಿ ಇಂತಹ ಶಿಬಿರಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಿದರೆ ರಜೆಯ ಸದುಪಯೋಗವಾಗುತ್ತದೆ ಎಂದು ಶುಭ ಹಾರೈಸಿದರು. ಜ್ಯೂನಿಯರ್ ಜೇಸಿಯ ಅಧ್ಯಕ್ಷೆ ದೀಕ್ಷಿತಾ ಗೋಡೆ ಉಪಸ್ಥಿತರಿದ್ದರು. ಕಾಲೇಜಿನ ದೈಹಿಕ ನಿರ್ದೇಶಕರಾದ ಶಂಕರನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಬಿರಾರ್ಥಿ ವಿಘ್ನೇಶ್ ಕೆ.ಎಸ್. ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.










