ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯ ಸರಕಾರ ಸಿಹಿನೀರು ಮತ್ತು ಉಪ್ಪು ನೀರಿಗೆ ಭಿನ್ನ ಮರಳು ನೀತಿ ಜಾರಿಗೊಳಿಸಿದ್ದರಿಂದಾಗಿ ಜಿಲ್ಲೆಯಾದ್ಯಂತ ಮರಳು ಅಭಾವ ಕಾಣಿಸಿಕೊಂಡು ಸಮಸ್ಯೆಯಾಗಿ ಪರಿಣಮಿಸಿದೆ. ಸರಕಾರವು ಏಕರೂಪ ಮರಳು ನೀತಿ ಜಾರಿಗೊಳಿಸಿ ಈ ಸಮಸ್ಯೆಗೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಜಿಲ್ಲೆಯಾದ್ಯಂತ ಈ ಮರಳು ಸಮಸ್ಯೆಯಿಂದಾಗಿ ಖಾಸಗಿ ಮನೆ ಮತ್ತಿತರ ವಾಣಿಜ್ಯ ಕಟ್ಟಡಗಳ ಕಾಮಗಾರಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ, ಸಾಲ ಮಾಡಿ ಕಟ್ಟಡ ನಿರ್ಮಾಣದಲ್ಲಿ ಹಣ ತೊಡಗಿಸಿದವರ ಸ್ಥಿತಿಯಂತೂ ಹೇಳತೀರದು. ಅತ್ತ ಮರಳು ಸಿಗದ ಕಾರಣಕ್ಕಾಗಿ ಕಟ್ಟಡ ಕಾಮಗಾರಿಯೂ ಪೂರ್ಣಗೊಳ್ಳದೇ ಇತ್ತ ಪಡೆದ ಸಾಲದ ಕಂತನ್ನು ಮರುಪಾವತಿಸಲಾಗದೇ ಪರದಾಡುತ್ತಿದ್ದಾರೆ. ಕಾಮಗಾರಿ ಸ್ಥಗಿತಗೊಂಡ ಕಾರಣಕ್ಕೆ ಹಣ ತೊಡಗಿಸಿದ ಗುತ್ತಿಗೆದಾರರ ಬಿಲ್ ಪಾವತಿಯಾಗುತ್ತಿಲ್ಲ. ದಿನಗೂಲಿ ನಂಬಿರುವ ಕಟ್ಟಡದ ಕಾರ್ಮಿಕರು ಕೆಲಸವಿಲ್ಲದೇ ಊಟಕ್ಕಿಲ್ಲದೇ ಪರಿತಪಿಸುತ್ತಿದ್ದಾರೆ. ಆದರೆ ಈ ಸಮಸ್ಯೆಗಳನ್ನು ಅರ್ಥೈಸಿಕೊಂಡು ಏಕರೂಪ ಮರಳು ನೀತಿ ಜಾರಿಗೊಳಿಸುವ ಕುರಿತು ಸರಕಾರಕ್ಕೆ ಒತ್ತಡ ಹೇರುವ ಬದಲಾಗಿ ನಮ್ಮ ಜನಪ್ರತಿನಿಧಿಗಳು ಕೇವಲ ಜಿಲ್ಲಾಧಿಕಾರಿಗಳಿಗೆ ಮತ್ತಿತರ ಅಧಿಕಾರಿಗಳಿಗೆ ಫೋನ್ ಕರೆ ಮಾಡುವುದರಿಂದ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಸಮಸ್ಯೆ ಪರಿಹಾರವಾಗದು ಎಂದಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ರಾಜ್ಯ ಕಾನೂನು ಸಚಿವರ ಕಛೇರಿಯಲ್ಲಿ ಈ ಕುರಿತು ಸಭೆ ಕರೆಯಲಾಗಿತ್ತು. ಕಾನೂನು ಸಚಿವ ಟಿ.ಬಿ. ಜಯಚಂದ್ರ, ನಗರಾಭಿವೃದ್ಧಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ ಮತ್ತು ಇಲಾಖಾ ಕಾರ್ಯದರ್ಶಿಗಳ ಸಮಕ್ಷಮ ’ಮಹಾರಾಷ್ಟ್ರ ಮಾದರಿ ಮರಳು ನೀತಿ’ ತಿದ್ದುಪಡಿ ತರುವ ಕುರಿತು ತೀರ್ಮಾನಿಸಲಾಗಿತ್ತು. ಆದರೆ ಅದು ಕೇವಲ ಸಭೆಯಾಗಿ ಉಳಿಯಿತೇ ಹೊರತು ಆ ಕುರಿತು ಈ ತನಕ ಯಾವುದೇ ಕ್ರಮ ಕೈಗೊಳ್ಳದಿದ್ದುದು ದುರ್ದೈವದ ಸಂಗತಿಯಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಶೆಣೈ ಹಾಗೂ ಕುಂದಾಪುರದ ಹಿರಿಯ ರಾಜಕಾರಣಿ ಹಾಗೂ ಜನಪರ ಪ್ರಗತಿಪರ ವೇದಿಕೆಯ ಸಂಚಾಲಕ ಮಾಣಿ ಗೋಪಾಲ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.