ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆ ನೀಡಬೇಕೆಂಬ ಉದ್ದೇಶದಿಂದ ನಮ್ಮ ಹಿರಿಯರು ಸ್ವಾತಂತ್ರ್ಯವನ್ನು ತಂದುಕೊಟ್ಟರು. ಆದರೆ ನಾವು ಇಂದಿಗೂ ಸಂಘಗಳನ್ನು ಕಟ್ಟಿಕೊಂಡು ಕನಿಷ್ಠ ಕೂಲಿಗಾಗಿ ಬೇಡಿಕೆಯಿಡುವ ದುಸ್ಥಿತಿಯಲ್ಲಿದ್ದೇವೆ ಎಂದು ಸಿಐಟಿಯು ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ವರಲಕ್ಷ್ಮೀ ವಿಷಾದ ವ್ಯಕ್ತಪಡಿಸಿದರು.
ಅವರು ಶಾಸ್ತ್ರೀ ವೃತ್ತದ ಬಳಿ ಸಿಐಟಿಯು ಕುಂದಾಪುರ ತಾಲೂಕು ಸಮಿತಿ ಮೇ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇಂದು ಸರಕಾರ ಹಾಗೂ ಸ್ವಾತಂತ್ರ್ಯದ ವ್ಯಾಖ್ಯಾನ ಕೂಡ ಬದಲಾಗುತ್ತಿದೆ. ಭಾರತದಲ್ಲಿ ಗುತ್ತಿಗೆ ಪದ್ದತಿಯಡಿ ನಿಯಮಗಳನ್ನು ಗಾಳಿಗೆ ತೂರಿ ಕೆಲಸಗಾರರನ್ನು ಜಾಗತಿಕ ಒತ್ತೆಯಾಳಾಗಿಸುವ ಹುನ್ನಾರ ನಿರಂತರವಾಗಿ ಸಾಗಿದೆ. ಬೆಲೆಏರಿಕೆಯನ್ನು ಮಾಡುವ ಸರಕಾರಗಳು ಕಾರ್ಮಿಕರ ಕನಿಷ್ಠ ವೇತನ ಹೆಚ್ಚಿಸುವ ಬಗ್ಗೆ ಒಮ್ಮೆಯೂ ಚಿಂತಿಸಿಲ್ಲ. ಪ್ರಜೆಗಳ ಕಷ್ಟ, ನಷ್ಟಗಳಿಗೆ ಸ್ಪಂದಿಸಬೇಕಾದ ಸರಕಾರಕ್ಕೆ ತಾಯಿ ಮನಸ್ಸು ದೂರವಾಗಿ ಕ್ರೌರ್ಯ ತುಂಬಿಕೊಂಡಿದೆ ಎಂದರು.
ಸಿಐಟಿಯು ಕುಂದಾಪುರ ತಾಲೂಕು ಸಮಿತಿ ಅಧ್ಯಕ್ಷ ಎಚ್. ನರಸಿಂಹ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಹೆಂಚು ಕಾರ್ಮಿಕರ ಸಂಘದ ಅಧ್ಯಕ್ಷ ವಿ. ನರಸಿಂಹ, ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಯು. ದಾಸ್ ಭಂಡಾರಿ, ಬಿಡಿ ವರ್ಕರ್ಸ್ ಯುನಿಯನ್ ಅಧ್ಯಕ್ಷ ಮಹಾಬಲ ವಡೇರಹೊಬಳಿ, ಕಾರ್ಯದರ್ಶಿ ಬಲ್ಕಸ್, ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ ಬರೆಕಟ್ಟು, ಅಂಗನವಾಡಿ ನೌಕರರ ಸಂಘದ ತಾಲೂಕು ಸಮಿತಿ ಅಧ್ಯಕ್ಷೆ ರತಿ ಶೆಟ್ಟಿ, ಅಕ್ಷರದಾಸೋಹ ನೌಕರರ ಸಂಘದ ಅಧ್ಯಕ್ಷೆ ಲತಾ, ಕಾರ್ಯದರ್ಶಿ ಸುಶೀಲಾ ನಾಡ, ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಶೀಲಾವತಿ, ಕೆಲಸಗಾರರ ಸಂಘದ ಅಧ್ಯಕ್ಷೆ ಜ್ಯೋತಿ, ನಾಗರತ್ನ ನಾಡ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಸಮಿತಿ ಅಧ್ಯಕ್ಷ ರಾಜೀವ ಪಡುಕೋಣೆ ಮೊದಲಾದವರು ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಸಿಐಟಿಯು ಅಧ್ಯಕ್ಷ ನರಸಿಂಹ ಎಚ್. ಸ್ವಾಗತಿಸಿ, ಕಾರ್ಯದರ್ಶಿ ವೆಂಕಟೇಶ ಕೋಣಿ ವಂದಿಸಿದರು. ಉಪಾಧ್ಯಕ್ಷ ಸುರೇಶ್ ಕಲ್ಲಾಗರ್ ನಿರೂಪಿಸಿದರು. ಬಹಿರಂಗ ಸಭೆಗೂ ಮೊದಲು ಕಾರ್ಮಿಕರು, ರೈತರು, ಕೃಷಿ ಕೂಲಿಕಾರರಿಂದ ಬೃಹತ್ ಮೆರವಣಿಗೆ ನಡೆಯಿತು.