ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಧಾರ್ಮಿಕತೆಯ ಭಾವನೆಗಳು ಹೆಚ್ಚುತ್ತಿರುವುದರಿಂದ ಧಾರ್ಮಿಕ ಕೇಂದ್ರಗಳು ಅಭಿವೃದ್ದಿ ಪಥದತ್ತ ಸಾಗುತ್ತಿದೆ. ನಮ್ಮಲ್ಲಿರುವ ದೈವೀಕ ಭಾವನೆಗಳನ್ನು ಉದ್ದೀಪನೆಗೊಳಿಸುವ ಮೂಲಕ ಶ್ರದ್ದಾ, ಭಕ್ತಿಯಿಂದ ಆರಾಧಿಸಿದರೆ ಭಗವಂತನ ಸಾಕ್ಷಾತ್ಕಾರ ಸಾಧ್ಯ ಎಂದು ವಿಹಿಂಪ ದಕ್ಷಿಣ ಕನ್ನಡ ಪ್ರಾಂತ ಮಠಮಂದಿರಗಳ ಸಂಪರ್ಕ ಪ್ರಮುಖ್ ಹೆಚ್. ಪ್ರೇಮಾನಂದ ಶೆಟ್ಟಿ ಹೇಳಿದರು.
ಹೇರೂರು ಗ್ರಾಮದ ಪಡುಬೆಟ್ಟು ಯರುಕೋಣೆ ಶ್ರೀ ಮರ್ಲುಚಿಕ್ಕು ಮತ್ತು ಸಪರಿವಾರ ದೈವಸ್ಥಾನದ ನೂತನ ಗುಡಿಸಮರ್ಪಣೆ ಮತ್ತು ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಭಕ್ತಿಯಿಂದ ದೇವರ ಪ್ರೀತಿಗಳಿಸಲು ಸಾಧ್ಯವಿದೆ. ಭಕ್ತಿ, ಶ್ರದ್ಧೆ ಹಾಗೂ ಪ್ರಾಮಾಣಿಕತೆಗೆ ದೇವರು ಒಲಿಯುತ್ತಾನೆ. ನಮ್ಮಲ್ಲಿ ಕರುಣೆ, ಮಿತೃತ್ವ ಭಾವನೆ ಇರಬೇಕು. ಯಾರೊಬ್ಬರನ್ನು ದ್ವೇಷಿಸದೆ ಎಲ್ಲರನ್ನೂ ಪ್ರೀತಿಯಿಂದ ನಾವೆಲ್ಲರೂ ಒಂದೇ ಎಂಬ ಭಾವದಿಂದ ನೋಡಬೇಕು. ನಮ್ಮಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿಕೊಂಡು ಸಮಾಜದಲ್ಲಿ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಬೆಳೆಯಬೇಕು ಎಂದ ಅವರು ಜಾತಿ, ಧರ್ಮದ ವಿಷಬೀಜ ಬಿತ್ತಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿರುವುದು ವಿಷಾದನೀಯ ಎಂದರು.
ಇಂದು ಸಮಾಜದಲ್ಲಿ ಹಿರಿಯರು ವಿಕೃತ ವಿಚಾರಗಳು ಹೆಚ್ಚು ಪ್ರಕಟಮಾಡುತ್ತಿರುವ ಹಿನ್ನೆಲೆಯಲ್ಲಿ ಬಾಲ್ಯದಲ್ಲಿಯೇ ಮಕ್ಕಳ ಮಗ್ಧ ಮನಸುಗಳು ಇಂತಹ ಕೃತ್ಯಗಳಿಂದ ಆಕರ್ಷಿತರಾಗಿ ಮುಂದೆ ತಪ್ಪುದಾರಿಯಲ್ಲಿ ಸಾಗುವುದರ ಮೂಲಕ ರಾಷ್ಟ್ರವಿರೋಧಿಯಾಗಿ ಬಿಂಬಿಸಲ್ಪಡುತ್ತಾನೆ. ಮತಾಂತರಗಳು ಹೆಚ್ಚಾಗಿ ಆಂತರಿಕ ಜಗಳ ಹೆಚ್ಚುತ್ತಿರುವ ಬಗ್ಗೆಯೂ ಕೂಡಾ ಪ್ರಾರಂಭದಲ್ಲಿ ಜಾಗೃತೆವಹಿಸಬೇಕು ಎಂದು ಸಲಹೆ ನೀಡಿದರು.
ದೈವಸ್ಥಾನದ ಸಮಿತಿಯ ಗೌರವಾಧ್ಯಕ್ಷ ಶಿವರಾಮ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಶುಭಹಾರೈಸಿದರು. ಅರ್ಚಕ ಹಾಗೂ ಪುರೋಹಿತ ಎಂ. ಕೃಷ್ಣ ಭಟ್, ದೈವಸ್ಥಾನದ ಅಧ್ಯಕ್ಷ ವೈ. ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಎ. ಭಾಸ್ಕರ್ ಶೆಟ್ಟಿ ಸ್ವಾಗತಿಸಿ, ಎಂ. ವಿಶ್ವನಾಥ ಶೆಟ್ಟಿ ನಿರೂಪಿಸಿದರು. ನಂತರ ಶಿವಮೊಗ್ಗ ಯಕ್ಷಕೂಟ ಮಹಿಳಾ ಸದಸ್ಯೆಯರಿಂದ ಯಕ್ಷಗಾನ ಬಯಲಾಟ ನಡೆಯಿತು.