ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ರಾಜ್ಯದಲ್ಲೇ ಗರಿಷ್ಠ ಪದವಿ ಪೂರ್ವ ವಿದ್ಯಾರ್ಥಿಗಳನ್ನು ಹೊಂದಿರುವ ಆಳ್ವಾಸ್ ಪದವಿಪೂರ್ವ ಕಾಲೇಜು ಪ್ರಸಕ್ತ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಶೇ.99.20 ಫಲಿತಾಂಶ ಪಡೆದಿದೆ. ಇದರೊಂದಿಗೆ ಪಡೆದಿದ್ದು ಕಳೆದ 8 ವರ್ಷಗಳಿಂದ 99 ಶೇ ಪಡೆದ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾಲೇಜಿನಿಂದ ಒಟ್ಟು 4,285 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 4,251 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಆಳ್ವಾಸ್ ಶೇ 99.20 ಫಲಿತಾಂಶ ಕಾಮರ್ಸ್ ‘ಡಬಲ್’ರ್ಯಾಂಕ್ ಸಾಧನೆವಿಜ್ಞಾನ ವಿಭಾಗದಲ್ಲಿ 3,409 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 3,386 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.99.33 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 815 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 806 ವಿದ್ಯಾರ್ಥಿಗಳು ಉತ್ರ್ತೀಣರಾಗುವುದರೊಂದಿಗೆ ಶೇ.98.90 ಫಲಿತಾಂಶ ಲಭಿಸಿದೆ. 61 ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಹಾಜರಾಗಿದ್ದು, 59 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಶೇ 96.72 ಫಲಿತಾಂಶ ಗಳಿಸಿದೆ. ವಾಣಿಜ್ಯ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದಲ್ಲಿ ಓರ್ವ ವಿದ್ಯಾರ್ಥಿನಿ ರಾಜ್ಯಮಟ್ಟದಲ್ಲಿ ಟಾಪ್ ಟೆನ್ ಪಟ್ಟಿಯಲ್ಲಿ ಗುರುತಿಸಿಕೊಳ್ಳುವ ಸಾಧನೆ ಮೆರೆದಿದ್ದಾರೆ.
ಕಾಮರ್ಸ್ ವಿಭಾಗದ ಇಬ್ಬರು ರಾಜ್ಯಕ್ಕೆ ದ್ವಿತೀಯ
ಆಳ್ವಾಸ್ ಕಾಲೇಜಿನ ಆಶಿಕ್ ನಾರಾಯಣ ಹಾಗೂ ದಕ್ಷಾ ಜೈನ್ 593( ಶೇ.98.83) ಅಂಕ ಗಳಿಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕಾಲೇಜಿನ ಸನ್ಮಯಿ.ಎಂ 591(ಶೇ.98.5) ಅಂಕಗಳನ್ನು ಪಡೆದಿದ್ದು, ರಾಜ್ಯದ ವಿಜ್ಞಾನ ವಿಭಾಗದಲ್ಲಿ 6 ನೇ ಸ್ಥಾನ ಹಾಗೂ ಈ ವಿಭಾಗದಲ್ಲಿ ವಲಯದಲ್ಲೇ ಪ್ರಥಮ ಸ್ಥಾನ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ರಾಹುಲ್ 559 ಅಂಕ ಗಳಿಸಿ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಅಗ್ರಸ್ಥಾನಿಯಾಗಿದ್ದಾರೆ.
ಕಾಲೇಜಿನ 12 ವಿದ್ಯಾರ್ಥಿಗಳು ಶೇ.98ಕ್ಕಿಂತ ಅಧಿಕ ಹಾಗೂ 331 ವಿದ್ಯಾರ್ಥಿಗಳು ಶೇ.95ಕ್ಕಿಂತ ಅಧಿಕ ಅಂಕಗಳನ್ನು ಪಡೆದಿದ್ದಾರೆ. ಎಸ್‍ಎಸ್‍ಎಲ್‍ಸಿಯಲ್ಲಿ ಶೇ.95ಕ್ಕಿಂತ ಅಧಿಕ ಅಂಕಗಳನ್ನು ಪಡೆದಿರುವ 269 ವಿದ್ಯಾರ್ಥಿಗಳಿದ್ದಾರೆ, ಆಳ್ವಾಸ್‍ಗೆ ಸೇರಿ ಇಲ್ಲಿ ಪಿಯುಸಿ 343 ವಿದ್ಯಾರ್ಥಿಗಳು ಶೇ.95 ಅಂಕ ಗಳಿಸಿರುವುದು ಸಾಧನೆಯಾಗಿದೆ. 1,190 ವಿದ್ಯಾರ್ಥಿಗಳು ಶೇ.90ಕ್ಕೂ ಅಧಿಕ, 2049 ವಿದ್ಯಾರ್ಥಿಗಳು 85ಕ್ಕೂ ಅಧಿಕ ಅಂಕಗಳಿಸಿ ಸಾಧನೆ ಮೆರೆದಿದ್ದಾರೆ.
ಕ್ರೀಡಾ ವಿದ್ಯಾರ್ಥಿಗಳ ಸಾಧನೆ:
ಕಳೆದ 8 ವರ್ಷಗಳಿಂದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಶೇ.99ಕ್ಕಿಂತಲೂ ಹೆಚ್ಚು ಅಂಕ ಪಡೆದಿರುವುದು ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ನಮ್ಮಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಂತಹ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ದ.ಕ ಜಿಲ್ಲೆ ಪಿಯುಸಿ ಫಲಿತಾಂಶದಲ್ಲಿ ರಾಜ್ಯದಲ್ಲೇ ಅಗ್ರಸ್ಥಾನಿಯಾಗಲು, ಆಳ್ವಾಸ್‍ನ ಕೊಡುಗೆಯೂ ಮಹತ್ವದಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.
ಕ್ರೀಡಾ ಸಾಧನೆಯನ್ನು ಪಡೆದು 93 ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಹಿಂದೆ ದತ್ತು ಶಿಕ್ಷಣ ಯೋಜನೆಯಡಿ ಉಚಿತ ಶಿಕ್ಷಣ ವ್ಯವಸ್ಥೆ ಮಾಡಲಾಗಿದ್ದು, ಇದರಲ್ಲಿ 92 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಂತಾರಾಷ್ಟ್ರೀಯಮಟ್ಟದಲ್ಲಿ ಒಬ್ಬರು, ರಾಷ್ಟ್ರಮಟ್ಟದಲ್ಲಿ 27 ವಿದ್ಯಾರ್ಥಿಗಳು ಹಾಗೂ 78 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಪದಕ ವಿಜೇತರಾಗಿದ್ದಾರೆ ಎಂದು ಡಾ.ಆಳ್ವ ಮಾಹಿತಿ ನೀಡಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಸಂತಸ ಹಂಚಿಕೊಂಡರು . ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಪದ್ಮನಾಭ ಶೆಣೈ ಉಪಸ್ಥಿತರಿದ್ದರು.