ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಸರ್ಕಾರಿ ಶಾಲೆಯಲ್ಲಿ ಆಂಗ್ಲ ಭಾಷೆಯಲ್ಲಿ ಶಿಕ್ಷಣ ನೀಡುವ ಅನಿವಾರ್ಯ ಪರಿಸ್ಥಿತಿ ಇಂದು ನಿರ್ಮಾಣವಾಗಿದ್ದು, ಶಾಲೆಯನ್ನು ಉಳಿಸಿಕೊಳ್ಳುವ ಹಾಗೂ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಖಾಸಗಿ ಶಾಲೆಯಲ್ಲಿರುವಂತೆ ಆಂಗ್ಲ ಭಾಷಾ ಶಿಕ್ಷಣ ನೀಡುವ ಯೋಜನೆಯನ್ನು ಶತಮಾನೋತ್ಸವದ ನೆನಪಿಗಾಗಿ ಆರಂಭಿಸುತ್ತಿದ್ದು, ಉಚಿತವಾಗಿ ಎಲ್.ಕೆಜಿ, ಯುಕೆಜಿ, ೧ನೇ ತರಗತಿಯನ್ನು ಈ ಬಾರಿ ಆರಂಭಿಸಲಾಗುತ್ತಿದೆ ಎಂದು ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಹೇಳಿದರು.
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿ ಪ್ರಸಕ್ತ ಸಾಲಿನಲ್ಲಿ ನೂತನವಾಗಿ ಆರಂಭಿಸಲಾದ ಆಂಗ್ಲಭಾಷಾ ಪೂರ್ವ ಪ್ರಾಥಮಿಕ ವಿಭಾಗ ಹಾಗೂ ೧ನೇ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಂಗ್ಲ ಭಾಷೆಯಲ್ಲಿ ಶಿಕ್ಷಣ ನೀಡುವುದು, ಈ ಬಗ್ಗೆ ಟ್ರಸ್ಟ್‌ನ ರಚನೆ, ದಾನಿಗಳ ಸಹಕಾರ, ರೋಟರಿ ಕ್ಲಬ್ ಮೂಲಕ ಪೀಠೋಪಕರಣ, ವಾಹನ ವ್ಯವಸ್ಥೆಯ ಬಗ್ಗೆ ಚಿಂತನೆಗಳು ನಡೆದಿದೆ. ಪೋಷಕರಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದ್ದು, ವ್ಯವಸ್ಥೆಯ ನಿಟ್ಟಿನಲ್ಲಿ ಸೀಮಿತ ಸಂಖ್ಯೆಗೆ ನಿಗದಿಪಡಿಸಲಾಗಿದೆ ಎಂದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಣಾಧಿಕಾರಿ, ರೋಟರಿಯ ಲಿಟರೇಚರ್ ಛೇರ್‌ಮನ್ ಗೋಪಾಲ ಶೆಟ್ಟಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಅವನದ್ದೇಯಾದ ಸಾಮಾರ್ಥ್ಯ ಇರುತ್ತದೆ. ಸೂಕ್ತ ಪ್ರೋತ್ಸಾಹ ಸಿಕ್ಕಾಗ ಅದು ಪ್ರಕಟವಾಗುತ್ತದೆ. ಶೃದ್ದೆ ಇದ್ದರೆ ಸಾಧನೆ ಸಾಧ್ಯ ಎಂದರು. ಅಕ್ಷರದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕರಾದ ಸೀತಾರಾಮ ಶೆಟ್ಟರು ಮಾತನಾಡಿ, ಇದೊಂದು ಕ್ರಾಂತಿಕಾರಕವಾದ ಹೆಜ್ಜೆ, ಸ್ಪರ್ಧಾತ್ಮಕವಾದ ದಿನಗಳಲ್ಲಿ ಆಂಗ್ಲಭಾಷಾ ವ್ಯಾಮೋಹ ಹೆಚ್ಚುತ್ತಿದೆ. ಆ ನೆಲೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಈ ಪ್ರಯತ್ನ ಮಾದರಿಯಾಗಲಿ ಎಂದರು.
ಎಸ್.ಡಿ.ಎಂಸಿ ಅಧ್ಯಕ್ಷ ಚಂದ್ರ ರಾಯಪ್ಪನಡಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಜಿಲ್ಲಾ ಟಿಆರ್‌ಎಫ್ ಕೊರ್ಡಿನೇಟರ್ ಜಿ.ಶ್ರೀಧರ್ ಶೆಟ್ಟಿ, ಬೈಂದೂರು ವಲಯ ಶಿಕ್ಷಣಾಧಿಕಾರಿ ನಾಗೇಶ ನಾಯಕ್, ಶಿಕ್ಷಣ ಸಂಯೋಜಕರಾದ ನಿತ್ಯಾನಂದ ಶೆಟ್ಟಿ, ಸಿ.ಆರ್.ಪಿ ಭಾಸ್ಕರ ನಾಯಕ್, ಹಿಜಾಣದ ಶ್ರೀ ಚಿಕ್ಕು ದೇವಸ್ಥಾನದ ಆಡಳಿತ ಮೊಕ್ತೇಸರ ರಘುರಾಮ ಶೆಟ್ಟಿ, ಗ್ರಾ.ಪಂ. ಸದಸ್ಯ ಉದಯ ಕೆ.ನಾಯ್ಕ್ ವಂಡ್ಸೆ ಉಪಸ್ಥಿತರಿದ್ದರು.
ಬೈಂದೂರು ವಲಯ ಶಿಕ್ಷಣಾಧಿಕಾರಿ ನಾಗೇಶ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಮೋಹಿನಿ ಬಾ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ರಾಜು ಎನ್. ವಂದಿಸಿದರು. ಸಹಶಿಕ್ಷಕಿ ನಾಗವೇಣಿ ಕಾರ್ಯಕ್ರಮ ನಿರ್ವಹಿಸಿದರು.ಪೋಷಕರ ಪರವಾಗಿ ಶಿಕ್ಷಕ ಗಣೇಶ ದೇವಾಡಿಗ ಮಾತನಾಡಿದರು. ಸಹಶಿಕ್ಷಕರಾದ ಆಶಾ, ಶ್ರೀನಿವಾಸ ಹೋಬಳಿದಾರ್ ಗೌರವ ಶಿಕ್ಷಕರಾದ ಅಂಬಿಕಾ ಶೆಟ್ಟಿ, ಭಾರತಿ, ಸಾರಾಬಿ, ಎಸ್.ಡಿ.ಎಂಸಿ ಸದಸ್ಯರು ಸಹಕರಿಸಿದ್ದರು.