ಮಾಧ್ಯಮದ ಬೇಜವಾಬ್ದಾರಿ – ಹೋದ ಜೀವ ಬಂದೀತೇ?

Call us

Call us

Call us

ಎ.ಎಸ್.ಎನ್ ಹೆಬ್ಬಾರ್. ಕುಂದಾಪ್ರ ಡಾಟ್ ಕಾಂ ಅಂಕಣ.
ಮಾಧ್ಯಮದ ಗುರಿ, ಉದ್ದೇಶ, ನೀತಿ, ನಿಯಮಗಳೇನು? ಸಾಮಾಜಿಕ ಸ್ವಾಸ್ಥ್ಯ, ಹಿತ ಬಿಟ್ಟು ಮಾಧ್ಯಮ ಇರಲಾದೀತೇ? ಪ್ರಬಲವಾದ ಮಾಧ್ಯಮ ಇರುವುದರಿಂದಲೇ ಜಗತ್ತಿನಲ್ಲಿ ಪ್ರಜಾಪ್ರಭುತ್ವ ಉಳಿದಿದೆ, ಮೌಲ್ಯಗಳು ಉಳಿದಿವೆ, ಅನ್ಯಾಯಗಳಿಗೆ ಕಡಿವಾಣ ಹಾಕಲಾಗಿದೆ ಎಂದಾದರೆ ನಿಜವಾಗಿಯೂ ಮಾಧ್ಯಮಗಳು ಸಮಾಜದ ರಕ್ಷಣೆಗಾಗಿ ಇದೆಯೇ ಹೊರತು ಸಮಾಜಕ್ಕೆ ವಿಮುಖಿಯಾಗಿ ಅಲ್ಲ. ಹೀಗೆ ಸಮಾಜಮುಖಿಯಾಗಬೇಕಾಗಿದ್ದ ಮಾಧ್ಯಮ ಗೊತ್ತಿದ್ದೋ, ಗೊತ್ತಿಲ್ಲದೆಯೋ ಎಷ್ಟೋ ಬಾರಿ ಸಮಾಜ ವಿಮುಖಿಯಾದ ಕಾರ್ಯ ನಡೆಸಿಬಿಡುತ್ತವೆ. ಇದರಿಂದಾಗುವ ಅನಾಹುತ ಅಪಾರ. ಕೆಲವೊಮ್ಮೆ ಇಂತಹ ಕೆಲಸಗಳು ವ್ಯಕ್ತಿಗಳ ಜೀವಕ್ಕೇ ಎರವಾಗಬಹುದು. ಹಾಗಾಗಿ ಮಾಧ್ಯಮಕ್ಕೆ ಹೆಜ್ಜೆ ಹೆಜ್ಜೆಗೂ ಎಚ್ಚರ ಅಗತ್ಯ.

Call us

Click Here

media irresponsible-Mediaಉದಾಹರಣೆಗೆ ಒಂದೂರಿನಲ್ಲಿ ಭೀಕರ ಕೊಲೆಗಳಾಗುತ್ತವೆ. ಪೋಲೀಸರು ಬಂದಿರುತ್ತಾರೆ. ಪೋಲೀಸು ನಾಯಿಗಳನ್ನು ಕರೆಸಲಾಗುತ್ತದೆ. ಬೆರಳಚ್ಚು ತಜ್ಞರು ಆಗಮಿಸುತ್ತಾರೆ. ಹಿರಿಯ ಪೋಲೀಸ್ ಅಧಿಕಾರಿಗಳು ತನಿಖೆಗಾಗಿ ಊರಲ್ಲೇ ಮೊಕ್ಕಾಂ ಹೂಡಿರುತ್ತಾರೆ. ಇಷ್ಟೆಲ್ಲ ಇದ್ದರೂ ಕೊಲೆಗಾರರು ಒಂದಿನಿತೂ ಸುಳಿವು ಇಡದೇ ಪರಾರಿಯಾಗಿರುತ್ತಾರೆ. ಪೋಲೀಸರು ರಾತ್ರಿ – ಹಗಲು ನಿದ್ರೆಬಿಟ್ಟು ಸುಳಿವಿನ ಜಾಡು ಹಿಡಿದು ಕೊಲೆಯ ರಹಸ್ಯ ಬೇಧಿಸಲು ಹೆಣಗಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪೋಲೀಸರಿಗೆ ನೈತಿಕ ಧೈರ್ಯ, ಸ್ಥೈರ್ಯ ತುಂಬಿ ಅವರ ತನಿಕಾ ಕಾರ್ಯವನ್ನು ಮೆಚ್ಚಿ ಬರೆದರೆ, ಅವರಿಗೆ ಕೊಲೆಗಾರರನ್ನು ಪತ್ತೆ ಹಚ್ಚಲು ಇನ್ನಷ್ಟು ಉತ್ತೇಜನ, ಸ್ಫೂರ್ತಿ. ಬದಲಾಗಿ, ಅವರೇನೋ ಬಲವಾದ ಜಾಡು ಹಿಡಿದು ಸಾಗುತ್ತಿರುವಾಗಲೇ ಕೊಲೆಯಾಗಿ ಒಂದುವಾರ ಕಳೆದರೂ ಯಾರನ್ನೂ ಬಂಧಿಸಿಲ್ಲ – ಪೋಲೀಸ್ ನಿಷ್ಕ್ರಿಯತೆ ! ಎಂದು ಬರೆದರೆ ಅವರಿಗೆ ಹೇಗಾಗಬೇಡ ? ಅವರ ನೈತಿಕ ಸ್ಥೈರ್ಯವನ್ನೇ ಕಲಕಿ, ಕದಡುವ ವ್ಯಾಖ್ಯಾನ ಯಾಕೆ? ಇದರರ್ಥ ಏನು? ‘ಯಾರನ್ನೂ ಬಂಧಿಸಿಲ್ಲ’ ಎಂದರೆ ಈಗಾಗಲೇ ಯಾರನ್ನೋ ಬಂಧಿಸಬೇಕಾಗಿತ್ತು, ಆದರೂ ಪೋಲೀಸರು ಯಾಕೋ ಬಂಧಿಸಿಲ್ಲ ಎಂಬ ಆರೋಪದ ವಾಸನೆ ಹೊಡೆಯುವುದಿಲ್ಲವೇ? ಇದು ತನಿಖೆಗೆ ಸಹಕಾರಿಯೇ? ಅಪಕಾರಿಯೇ? ಇದು ಇಷ್ಟಕ್ಕೇ ಮುಗಿಯುವುದಿಲ್ಲ. ಯಾವನೋ ಚಾಣಾಕ್ಷ ವರದಿಗಾರನಿಗೆ ಆತ ಪೋಲೀಸರ ಸ್ನೇಹಿತನಾಗಿರುವ ಕಾರಣವೋ ಏನೋ, ಪೋಲೀಸರಿಗೆ ಸಿಕ್ಕ ಸುಳಿವಿನ ಸುದ್ದಿ ಸಿಕ್ಕಿರುತ್ತದೆ. ಪೋಲೀಸರಿನ್ನೂ ಆ ಸುಳಿವು ಹಿಡಿದು ಕೊಲೆಗಾರನ ಪತ್ತೆಗೆ ಮುಂದಾಗಬೇಕು ಎನ್ನುವಷ್ಟರಲ್ಲೇ ಈತ ತನಗೆ ಸಿಕ್ಕಿದ ‘ಸ್ಕೂಪ್’ ಇದು ಎಂದು ತಿಳಿದುಕೊಂಡು ಮರುದಿನದ ಪತ್ರಿಕೆಯಲ್ಲಿ ಢಾಳಾಗಿ ಪ್ರಕಟಿಸಿಬಿಡುತ್ತಾನೆ. ‘ಸುಳಿವು ಹಿಡಿದ ಪೋಲೀಸರು – ಕೊಲೆಗಾರರ ಬಂಧನಕ್ಕೆ ಇಂದು ಕೊಯಮುತ್ತೂರಿಗೆ !’ ಇದನ್ನು ಹೀಗೆ ಪ್ರಕಟಿಸಿದರೆ ಏನಾದೀತು ಎಂಬುದು ಸಣ್ಣ ಮಗುವಿಗೂ ಗೊತ್ತು. ಕೊಯಮತ್ತೂರಿಗೆ ಪೋಲೀಸರು ಹೊರಟ ಸಂಗತಿ ಹೀಗೆ ಜಗಜ್ಜಾಹೀರು ಮಾಡಿದಾಗ ಕೊಲೆಗಾರನಾದರೂ ಕೊಯಮತ್ತೂರಿನಲ್ಲಿ ಯಾಕಿರುತ್ತಾನೆ? ಸುದ್ದಿ ಲೀಕ್ ಮಾಡಿದ ಪೋಲೀಸ್ ಸ್ನೇಹಿತರು ತಲೆತಲೆ ಚಚ್ಚಿಕೊಳ್ಳಬೇಕು ! ಇದು ಸಾಮಾಜಿಕ ಜವಾಬ್ದಾರಿಯ ಲಕ್ಷಣವೇ? /ಕುಂದಾಪ್ರ ಡಾಟ್ ಕಾಂ ಅಂಕಣ/ ಸುದ್ದಿಗಾರಿಕೆಗೊಂದು ಲಂಗು-ಲಗಾಮು, ಇತಿ-ಮಿತಿ, ಇಲ್ಲವೇ? ಮಾಧ್ಯಮ ತನ್ನನ್ನು ತಾನು ಪ್ರಶ್ನಿಸಿಕೊಳ್ಳಬೇಕು.

ಕಳೆದುಹೋದ ಪದ್ಮಪ್ರಿಯಳ ಜೀವ
ಪದ್ಮಪ್ರಿಯ ಪ್ರಕರಣದಲ್ಲಿ ಆದದ್ದಾದರೂ ಏನು? ಇದೇ ಅಲ್ಲವೇ? ಈ ಪದ್ಮಪ್ರಿಯ ಎಂಬ ಗೃಹಿಣಿ ಉಡುಪಿ ಶಾಸಕರ ಧರ್ಮಪತ್ನಿ ಎಂಬುದು ಉಡುಪಿಗಿಂತ ಹೊರಗೆ ಗೊತ್ತಾದದ್ದೇ ಆಕೆ ಕಾಣೆಯಾದ ಸುದ್ದಿ ಪತ್ರಿಕೆಗಳು ಪುಂಖಾನುಪುಂಖವಾಗಿ ಪ್ರಕಟಿಸಿದಾಗ. ಆಕೆ ತಾನಾಗಿ ಊರು ಬಿಟ್ಟಳೋ, ಆಕೆಯನ್ನು ಅಪಹರಣ ಮಾಡಲಾಯಿತೋ ಎಂದೆಲ್ಲ ಊಹಾಪೋಹಗಳು ಪತ್ರಿಕೆಗಳಲ್ಲಿ ಯಥೇಚ್ಛವಾಗಿ ಬಂದುವು. ಆದರೆ ಆಕೆಯನ್ನು ಕಾಪಾಡಿ, ಜೀವಸಹಿತ ಹಿಂದಕ್ಕೆ ಕರೆತರಬೇಕು ಎಂಬ ಇಚ್ಛೆಯಿಂದಲೋ ಏನೋ ಪೋಲೀಸರು ಮಾಧ್ಯಮದ ದಾರಿತಪ್ಪಿಸುವ ಯತ್ನ ಮಾಡಿದರು. ಆದರೆ ಆಕೆ ದಿಲ್ಲಿಯ ಫ್ಲಾಟೊಂದರಲ್ಲಿ ಜೀವಂತ ಇದ್ದಾಳೆಂಬುದು ಜಗಜ್ಜಾಹೀರಾಗಿ ಬಿಟ್ಟಿತು. ಪೋಲೀಸರೇನಾದರೂ ಆಕೆಯನ್ನು ಮರಳಿತರಲು ಯತ್ನಿಸಿ, ಫ್ಲಾಟ್ ಹೊಕ್ಕರೆ ಆಕೆ ಸಾವಿಗೆ ಶರಣಾಗುವಳೆಂಬ ಭಯವೂ ಇದ್ದಿತ್ತು. ಇಂತಹ ಸಂದರ್ಭ ಸೂಕ್ಷ್ಮಾತಿಸೂಕ್ಷ್ಮ. ಓರ್ವ ವ್ಯಕ್ತಿಯ ಜೀವ ಮಾಧ್ಯಮದ ಕೈಯಲ್ಲಿದ್ದ ಹಾಗಿತ್ತು ಪರಿಸ್ಥಿತಿ. ಮಾಧ್ಯಮ ಸ್ವಲ್ಪ ಸಂಯಮ ವಹಿಸಿ ಸುಮ್ಮನಿದ್ದಿದ್ದರೆ ಉತ್ತಮ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿದಂತಾಗುತ್ತಿತ್ತೇನೋ. ಆದರೆ ಇದು ಬ್ರೇಕಿಂಗ್ ನ್ಯೂಸ್ಗಳ ಕಾಲ. ಕಾಯಲು ಮಾಧ್ಯಮಗಳಿಗೆ ವ್ಯವಧಾನವಾದರೂ ಎಲ್ಲಿದೆ? ಪದ್ಮಪ್ರಿಯ ಇದ್ದ ಫ್ಲಾಟು, ಪೋಲೀಸರು ದಿಲ್ಲಿ ತಲುಪಿದ್ದು, ಫ್ಲಾಟ್‌ಗೆ ದಾಳಿ ನಡೆಸಲು ಸಿದ್ಧವಾದದ್ದು ಎಲ್ಲ ಪುಂಖಾನುಪುಂಖವಾಗಿ ಬಿತ್ತರವಾಗುತ್ತಲೇ ಇತ್ತು ! ಪೋಲೀಸರು ಆಕೆಯ ಕೋಣೆ ಪ್ರವೇಶಿದಾಗ ಅವರಿಗೆ ದೊರೆತದ್ದು ಆಕೆಯ ಕಳೇಬರ. ಆಕೆಯ ಕೋಣೆಯಲ್ಲಿ ಟಿ.ವಿ. ಚಾಲೂ ಸ್ಥಿತಿಯಲ್ಲಿತ್ತು. ಟಿ.ವಿಯಲ್ಲಿ ಇನ್ನೇನು ಪೋಲೀಸರು ಆಕೆಯನ್ನು ಪತ್ತೆ ಮಾಡಿಯೇ ಬಿಡುತ್ತಾರೆಂಬ, ವಶಪಡಿಸಿತರುತ್ತಾರೆಂಬ ಸುದ್ದಿ ಬರುತ್ತಲೇ ಇತ್ತಂತೆ ! ಅಂದ ಮೇಲೆ ಮಾಧ್ಯಮ ಸ್ವಲ್ಪ ತಾಳಿದ್ದರೆ ಆಕೆ ಬಾಳುತ್ತಿದ್ದಳೋ ಏನೋ ! ಆಗಲೇ ಮಾಧ್ಯಮಗಳ ಈ ಪಾತ್ರದ ಬಗ್ಗೆ ಪತ್ರಿಕೆಗಳಲ್ಲಿ ಟೀಕೆಗಳು ಬಂದಿದ್ದವು. ಒಂದೆರಡುದಿನ ಇದನ್ನು ಜನ ಮಾತಾಡಿಕೊಂಡರು. ನಂತರ ಮರೆತೇ ಬಿಟ್ಟಿರಬೇಕು ! ಸಾರ್ವಜನಿಕ ವಿಸ್ಮರಣೆಯೇ ಮಾಧ್ಯಮಕ್ಕಿರುವ ವರದಾನ ! ಕುಂದಾಪ್ರ ಡಾಟ್ ಕಾಂ ಅಂಕಣ.

26/11ರ ದಾಳಿ ಸಂದರ್ಭದ ಅಚಾತುರ್ಯ
ಇದು ಓರ್ವ ವ್ಯಕ್ತಿಯ ಸಂಗತಿಯಾಯಿತು. ಇನ್ನು ದೇಶದ ಸಂಗತಿ ಬಂದಾಗಲೂ ಮಾಧ್ಯಮದವರ ಸಾಮಾಜಿಕ ಜವಾಬ್ದಾರಿಯ ಅಲಕ್ಷ್ಯ ಕಣ್ತೆರಸುವಂತಾದ್ದು. ೨೬/೧೧ರ ಉಗ್ರಗಾಮಿ ದಾಳಿಯ ಸಂದರ್ಭ ಏನಾಯಿತು? ಉಗ್ರಗಾಮಿಗಳು ಮಾಡುವಷ್ಟೂ ವಿಧ್ವಂಸಕ ಕೃತ್ಯ ನಡೆಸಿ, ಮತ್ತಷ್ಟು ಕೃತ್ಯ ನಡೆಸಲು ಸಜ್ಜಾಗಿ ತಾಜ್‌ಮಹಲ್ ಹೋಟೇಲ್ ಕಟ್ಟಡದಲ್ಲಿ ಅಡಗಿದ್ದರಲ್ಲ. ಆಗಲೂ ಅವರಿಂದ ಗುಂಡಿನ ಸುರಿಮಳೆ, ಬಾಂಬು ಸ್ಫೋಟ ಎಲ್ಲ ಇತ್ತಲ್ಲ ! ಅವರನ್ನು ಹಿಡಿದು ಸದೆಬಡಿಯಲು ಕೇಂದ್ರ ಸರಕಾರ ಪರಿಣತ ಕಮಾಂಡೋದಳವನ್ನೇ ಕಳುಹಿಸಿತ್ತು. ಈ ಕಮಾಂಡೋಗಳು ಉಗ್ರಗಾಮಿಗಳಿಗೆ ತಿಳಿಯದ ಹಾಗೆ ಹೋಟೇಲು ಹೊಕ್ಕು ದ್ರೋಹಿಗಳನ್ನು ಬಂಧಿಸುವುದೋ, ನಿರ್ನಾಮ ಮಾಡುವುದೋ ಮಾಡಬೇಕಾಗಿತ್ತು. ಮುಂಬೈ ಮೇಲಿನ ಈ ದಾಳಿ, ದೇಶದ ಮೇಲಿನ ದಾಳಿ ಎಂದೇ ಬಿಂಬಿಸಲಾಗಿತ್ತು. ಅಂತಹ ದ್ರೋಹಿಗಳನ್ನು ಸೆದೆ ಬಡಿಯಲು ಹೊರಟ ಕಮಾಂಡೋಗಳ ಜೀವರಕ್ಷಣೆಗೆ ರಾಷ್ಟ್ರದ ಕೋಟಿ ಕೋಟಿ ಜನ ಪ್ರಾರ್ಥಿಸುತ್ತಿದ್ದರು. ಆದರೆ ಮಾಧ್ಯಮದವರು ಮಾಡಿದ್ದಾದರೂ ಏನು? ಹೋಟೇಲಿನ ಹೊರಗೆ ಝಂಡಾ ಊರಿ, ಕ್ಯಾಮರಾ ನಿಲ್ಲಿಸಿ ನಮ್ಮ ಕಮಾಂಡೋಗಳು ನುಗ್ಗುವುದು, ಹೆಲಿಕಾಪ್ಟರ್‌ಗಳಿಂದ ಹಗ್ಗದಲ್ಲಿ ನೇತಾಡಿ ಇಳಿಯುವುದು, ತಾಜ್‌ಮಹಲ್ ಕಟ್ಟಡವನ್ನು ಪ್ರವೇಶಿಸುವುದು ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಬ್ರೇಕಿಂಗ್ ನ್ಯೂಸ್ ಆಗಿ ಬಹಿರಂಗಗೊಳಿಸುತ್ತಲೇ ಹೋದದ್ದು ! ತಾಜ್‌ಮಹಲ್ ಒಂದು ಸ್ಟಾರ್ ಹೋಟೇಲ್. ಅಲ್ಲಿ ರೂಮು ರೂಮಿನಲ್ಲೂ ಟಿ.ವಿ. ಇರುತ್ತದೆ. ಒಳಗೆ ಅವಿತ ಉಗ್ರಗಾಮಿಗಳೆಲ್ಲ ಟಿ.ವಿ. ಆನ್ ಮಾಡಿಕೊಂಡು ತಮ್ಮನ್ನು ಬಡಿಯಲು ಬರುವ ಕಮಾಂಡೋಗಳು ಎಲ್ಲಿ ಇಳಿಯುತ್ತಾರೆ, ಎಲ್ಲಿ ನುಗ್ಗುತ್ತಾರೆ ಎಂಬುದನ್ನು ಕಾಣಲು ಈ ಬ್ರೇಕಿಂಗ್ ನ್ಯೂಸ್ ಸಾಲದೇ ? ಜೀವ ಕೈಯಲ್ಲಿ ಹಿಡಿದು ಕಮಾಂಡೋಗಳು ದೇಶ ರಕ್ಷಣೆಗಾಗಿ ನುಗ್ಗುತ್ತಿದ್ದರೆ, ಇಡೀ ಭಾರತ ಉಸಿರು ಬಿಗಿಹಿಡಿದುಕೊಂಡು ‘ದೇವರೇ ನಮ್ಮ ಕಮಾಂಡೋಗಳಿಗೆ ಏನೂ ಅಪಾಯ ಆಗದೇ ಇರಲಿ. ದ್ರೋಹಿಗಳಿಗೆ ಶಾಸ್ತಿಯಾಗಲಿ’ ಎಂದು ಕಾಯುತ್ತಿದ್ದರೆ, ಈ ಕಮಾಂಡೋಗಳ ಜೀವಗಳನ್ನು ಹೀಗೆ ಅಪಾಯಕ್ಕೆ ಒಡ್ಡಿದ ಮಾಧ್ಯಮದವರ ಬೇಜವಾಬ್ದಾರಿ, ಅಜಾಗರೂಕತೆ, ಪ್ರಮಾದ, ಅಧಿಕಪ್ರಸಂಗತನ ಹಾಗೂ ಅನಾಹುತಕಾರೀ ಪ್ರವೃತ್ತಿ ಬಗ್ಗೆ ಏನೆನ್ನಬೇಕು? ಆಗಲೇ ಮಾಧ್ಯಮಕ್ಕೊಂದು ಕಡಿವಾಣ ಹಾಕಬೇಕು ಎಂದಿತ್ತು ಕೇಂದ್ರ ಸರಕಾರ. ಆದರೂ ಯಾಕೋ, ನಂತರ, ಎಂದಿನಂತೆ ಈ ಸಂಗತಿಯೂ ವಿಸ್ಮರಣೆಯ ಸಾಲಿನಲ್ಲಿ ಅಡಗಿಕೊಂಡಿತು. ಮಾಧ್ಯಮಕ್ಕಾದರೂ ಈ ಕುರಿತು ಪಾಪಪ್ರಜ್ಞೆ ಕಾಡಲಿಲ್ಲವೆಂದರೆ ಇದು ಎಂತಹ ದುರಂತ !

Leave a Reply