ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕಂಡ್ಲೂರು ಸಂತ ಅಂತೋನಿ ಪ್ರಾರ್ಥನಾ ಮಂದಿರದ ಆವರಣದ ಎದುರಿನಲ್ಲಿ ನಿಲ್ಲಿಸಲಾಗಿದ್ದ ಸಂತ ಅಂತೋನಿ ಮೂರ್ತಿಯನ್ನು ದುಷ್ಕರ್ಮಿಗಳು ಒಡೆದುಹಾಕಿದ ಘಟನೆ ವರದಿಯಾಗಿದೆ.
ಕಂಡ್ಲೂರಿನ ಪ್ರಾರ್ಥನಾ ಮಂದಿರ ನಾಲ್ಕು ಬದಿಗಳಲ್ಲಿ ಸಂತ ಅಂತೋನಿ ಮೂರ್ತಿಯನ್ನು ನಿರ್ಮಿಸಲಾಗಿದ್ದು, ಅದಕ್ಕೆ ಕೋಣೆಯನ್ನು ನಿರ್ಮಿಸಲಾಗಿತ್ತು. ಭಾನುವಾರ ರಾತ್ರಿ ಬಳಿ ಮಳೆ ಇದ್ದುದನ್ನು ತಮ್ಮ ಕುಕೃತ್ಯಕ್ಕೆ ಬಳಸಿಕೊಂಡ ದುಷ್ಕರ್ಮಿಗಳು ಮೂರ್ತಿಯನ್ನು ಒಡೆದು ಪುಡಿಗೈದಿದ್ದಾರೆ. ಬೆಳಿಗ್ಗೆ ವೇಳೆಗೆ ಒಡೆದ ಮೂರ್ತಿಯನ್ನು ಕಂಡ ಸ್ಥಳೀಯರು ಧರ್ಮಗುರು ವಿಶಾಲೋ ಲೋಬೋ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಬಸ್ರೂರು ಸಂತ ಫಿಲೀಪ್ ನೇರಿ ಚರ್ಚ್‌ನ ಅಧೀನಕ್ಕೊಳಪಟ್ಟಿದ್ದು ಕಂಡ್ಲೂರಿನ ಪ್ರಾರ್ಥನಾ ಮಂದಿರವೂ ಹೆದ್ದಾರಿಯ ಪಕ್ಕದಲ್ಲಿಯೇ ಇದ್ದರೂ ನಿರ್ಭೀತವಾಗಿ ದುಷ್ಕೃತ್ಯ ನಡೆಸಿ ಶಾಂತಿ ಕದಡುವ ಕೆಲಸಕ್ಕೆ ಮುಂದಾಗಿರುವುದನ್ನು ಸರ್ವಧರ್ಮದ ಮುಖಂಡರು ಖಂಡಿಸಿದ್ದಾರೆ. ಘಟನಾ ಸ್ಥಳಕ್ಕೆ ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.