ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿಕಾರಿಗೆಂದು ಒಟ್ಟಿಗೆ ತೆರಳಿದ್ದ ಸ್ನೇಹಿತನನ್ನು ಗುಂಡಿಟ್ಟು ಕೊಂದು ಘಟನೆ ಹೇರೂರು ಗ್ರಾಮದ ಮೇಕೋಡು ಜಕ್ಷನ್ ಬಳಿ ನಡೆದಿದ್ದು, ಘಟನೆಯಲ್ಲಿ ಕಂಬದಕೋಣೆ ಗ್ರಾಮದ ಆಚಾರಬೆಟ್ಟು ನಿವಾಸಿ ಪ್ರಶಾಂತ ಶೆಟ್ಟಿ(24) ಗುಂಡೇಟಿಗೆ ಬಲಿಯಾಗಿದ್ದಾನೆ. ಗುಂಡಿಕ್ಕಿ ಕೊಂದಿದ್ದಾನೆ ಎನ್ನಲಾಗಿರುವ ಮೇಕೊಡಿನ ಅಂಕಿತ ಶೆಟ್ಟಿ(24) ಹಾಗೂ ಇನ್ನಿರ್ವರನ್ನು ಬಂಧಿಸಲಾಗಿದೆ.
ಘಟನೆಯ ವಿವರ:
ಸ್ನೇಹಿತರಾದ ಪ್ರಶಾಂತ ಶೆಟ್ಟಿ, ಅಂಕಿತ್ ಶೆಟ್ಟಿ, ಮನೀಷ್ ಶೆಟ್ಟಿ ಹಾಗೂ ದೀಪಕ್ ಶೆಟ್ಟಿ ಎಂಬುವವರು ಒಟ್ಟಾಗಿ ಮಧ್ಯಾಹ್ನ ಅಂಕಿತ್ ಶೆಟ್ಟಿಯ ಮನೆಯಲ್ಲಿ ಗಡಿಪೂಜೆ ಊಟವನ್ನು ಮುಗಿಸಿ, ಸಂಜೆಯ ವರೆಗೆ ಮನೆಯ ಸಮೀಪದಲ್ಲಿಯೇ ಕ್ರಿಕೆಟ್ ಆಡಿಕೊಂಡು ಬಳಿಕ ನಾವುಂದ ಬಾರೊಂದರಲ್ಲಿ ಕಂಠಪೂರ್ತಿ ಕುಡಿದು ಶಿಕಾರಿಗೆಂದು ತೆರಳುವುದಾಗಿ ನಿರ್ಧರಿಸಿ ಮರಳಿ ಮೇಕೋಡಿನ ಅಂಕಿತನ ಮನೆಗೆ ತೆರಳಿದ್ದಾರೆ. ಮನಿಷ್ ಶೆಟ್ಟಿ ಹಾಗೂ ದೀಪಕ್ ಶೆಟ್ಟಿ ಅಂಕಿರ ಶೆಟ್ಟಿಯ ಇನ್ನೊಂದು ಮನೆಯಲ್ಲಿ ಹೋಗಿ ಮಲಗಿಕೊಂಡರೇ, ಪ್ರಶಾಂತ ಶೆಟ್ಟಿ ಅಂಕಿತ ಶೆಟ್ಟಿಯ ಮನೆಗೆ ತೆರಳಿದ್ದಾನೆ. ಅಲ್ಲಿ ಅಂಕಿತ್ ಬಂದೂಕು ಹಿಡಿಕೊಂಡಿರುವಾಗ ಟ್ರಗರ್ ಮೇಲೆ ಕೈಯಿಟ್ಟಿದ್ದರಿಂದ ಗುಂಡು ಹಾರಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಕುಡಿದ ಮತ್ತಿನಲ್ಲಿ ನಡೆದ ಘಟನೆಯಿಂದ ಎಚ್ಚತ್ತ ಅಂಕಿತ ಶೆಟ್ಟಿಯ ತಂದೆ ಕೂಡಲೇ ಪ್ರಶಾಂತನನ್ನು ಕಾರಿನಲ್ಲಿಯೇ ಕುಂದಾಪುರದ ಆಸ್ಪತ್ರೆಗೆ ಸಾಗಿಸಿದರಾದರೂ ದಾರಿಮಧ್ಯೆಯೇ ಪ್ರಶಾಂತ ಕೊನೆಯುಸಿರೆಳೆದ್ದಾರೆ. ಪ್ರಶಾಂತನ ಎದೆಯ ಎಡ ಭಾಗದಲ್ಲಿ ಗುಂಡು ಹೊಕ್ಕಿರುವುದರಿಂದ ಗಂಭಿರ ಗಾಯಗೊಂಡು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದ್ದು, ಎದೆಗೆ ಹೊಕ್ಕ ಗುಂಡನ್ನು ವಿಧಿ ವಿಜ್ಞಾನ ಕೇಂದ್ರಕ್ಕೆ ಕಳುಹಿಸಲಾಗಿದೆ.
ವಾರದ ಹಿಂದಷ್ಟೇ ಊರಿಗೆ ಬಂದಿದ್ದ ಪ್ರಶಾಂತ:
ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಮೃತ ಪ್ರಶಾಂತ ಶೆಟ್ಟಿ ವಾರದ ಹಿಂದಷ್ಟೇ ಊರಿಗೆ ಆಗಮಿಸಿದ್ದು, ಸ್ನೇಹಿತನಾದ ಅಂಕಿತನ ಮನೆಯಲ್ಲಿ ಗಡಿಪೂಜೆ ಇದ್ದುದರಿಂದ ಆತನ ಮನೆಗೆ ತೆರಳಿದ್ದ. ಮನೆಯಲ್ಲಿ ಒಟ್ಟಿಗೆ ಊಟ ಮಾಡಿದ್ದ ಸ್ನೇಹಿತರು ಹನ್ನೊಂದರ ವರಗೆ ಕುಡಿದು ಮರಳಿ ಅಂಕಿತ ಮನೆಗೆ ತೆರಳಿದ್ದೇ ಪ್ರಶಾಂತನಿಗೆ ಉರುಳಾಗಿತ್ತು. ಶಿಕಾರಿಗೆ ಹೋಗಲು ನಿರ್ಧರಿಸಿದ್ದ ಇಬ್ಬರು ಪ್ರಶಾಂತನ ಮನೆಗೆ ಕರೆಮಾಡಿ ಬೆಳಿಗ್ಗೆಯ ಜಾವ ಬರುತ್ತಾನೆಂದು ಸ್ವತಃ ಅಂಕಿತನೇ ತಿಳಸಿದ್ದ. ಆದರೆ ಅವರ ನಡುವೆ ಏನಾಯಿತೋ. ಪ್ರಶಾಂತ ಮಾತ್ರ ಹೆಣವಾಗಿದ್ದ.
ಪೊಲೀಸರು ಅಂಕಿತನನ್ನು ವಿಚಾರಣೆಗೆ ಒಳಪಡಿಸಿದಾಗ ವ್ಯತಿರಿಕ್ತ ಹೇಳಿಕೆ ನೀಡಿದ್ದ. ಮೊದಲು ಯಾರೂ ಮೂವರ ಅಪರಿಚಿರತ ಮ್ಯಾಕೋಡು ಜಂಕ್ಷನ್ ಬಳಿ ಬಂದು ಪ್ರಶಾಂತನಿಗೆ ಗುಂಡಿಕ್ಕಿ ಕೊಂದು ಹೋದರು ಎಂದು ಹೇಳಿದ್ದರೆ, ಬಳಿಕ ಅಚಾನಾಕಾಗಿ ಗುಂಡು ಪೈರ್ ಆಗಿ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾನೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷಕ ಸುದರ್ಶನ ಮುದ್ರಾಡಿ, ದಿವಾಕರ್, ಠಾಣಾಧಿಕಾರಿ ಸಂತೋಷ ಆಂನದ ಕಾಯ್ಕಿಣಿ ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಕೆ ಪ್ರಗತಿಯಲ್ಲಿದೆ.