ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೆಮ್ಮಾಡಿಯ ಮೂವತ್ತುಮುಡಿ ಹೊಳೆಗೆ ಬುಧವಾರ ಬಿದ್ದದ್ದ ಲಾರಿಯನ್ನು ಮೇಲಕ್ಕೆತ್ತಲು ಹರಸಾಹಸ ಪಡಬೇಕಾಯಿತು. ಹನ್ನೆರಡು ಚಕ್ರದ ಭಾರಿ ಗ್ರಾತ್ರದ ಲಾರಿಯಾಗಿದ್ದರಿಂದ ಕ್ರೇನ್ ಕೂಡಲೇ ಮೂಲಕ ಮೇಲೆತ್ತಲು ಸಾಧ್ಯವಾಗದೇ ಬೆಳಿಗ್ಗಿನಿಂದ ಒದ್ದಾಡುತ್ತಿದ್ದುದು ಕಂಡುಬಂತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಬ್ಲಾಕ್ ಮಾಡಿದ್ದರಿಂದ ಇತರ ವಾಹನಗಳಿಗೆ ತೀವ್ರ ಅಡಚಣೆ ಉಂಟಾಯಿತು. ಹೆದ್ದಾರಿಯ ಎರಡೂ ಬದಿಗಳಲ್ಲಿ ಸುಮಾರು ಒಂದು ಕಿ.ಮೀ ವರೆಗೆ ವಾಹನಗಳು ಸರತಿ ಸಾಲಿನಲ್ಲಿ ಕೆಲಕಾಲ ನಿಂತಿರುವುದು ಕಂಡುಬಂತು.
ಮಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ವಿಆರ್‌ಎಲ್ ಸಂಸ್ಥೆಗೆ ಸೇರಿದ ಲಾರಿಯು ಬುಧವಾರ ರಾತ್ರಿ ಚಾಲಕನ ಅಜಾಗರೂಕತೆಯಿಂದಾಗಿ ಮೂವತ್ತುಮುಡಿ ಬಳಿಯ ವಿದ್ಯುತ್ ಕಂಬಕ್ಕೆ ಗುದ್ದಿ, ಕಿರುಸೇತುವೆಯ ಬದಿಯನ್ನು ಒಡೆದುಕೊಂಡು ಹೊಳೆಗೆ ಬಿದ್ದಿತ್ತು. ಲಾರಿಯಲ್ಲಿದ್ದ ಚಾಲಕ ಸೇರಿದಂತೆ ಇನ್ನಿರ್ವರನ್ನು ಸ್ಥಳೀಯರು ಮೇಲಕ್ಕೆತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು.