ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿರೂರು ಕುಂದಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥಗೊಳಿಸುವ ಕಾಮಗಾರಿ ನಡೆಸುತ್ತಿರುವ ಸಂದರ್ಭ ಮಳೆಗಾಲದಲ್ಲಿ ಉದ್ಭವವಾಗುವ ಸಮಸ್ಯೆಗಳನ್ನು ಗಮನಕ್ಕೆ ತೆಗೆದುಕೊಳ್ಳದಿರುವುದರಿಂದ ಅವಾಮತರಗಳು ಸೃಷ್ಟಿಯಾಗಿವೆ. ಇದಕ್ಕೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ಅಪಾಯ ಕಾದಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಸಂಬಂಧಿಸಿದವರನ್ನು ಎಚ್ಚರಿಸಿದ್ದಾರೆ.
ಹೆದ್ದಾರಿಯ ಇಕ್ಕೆಲಗಳಲ್ಲಿ ಗತ್ಯವಿರುವೆಡೆ ಚರಂಡಿ ನಿರ್ಮಿಸದಿರುವುದರಿಂದ ಹೆದ್ದಾರಿಯ ಮೇಲೆಯೇ ಮಳೆನೀರು ಹರಿಯುತ್ತಿದೆ. ಮೋರಿಗಳನ್ನು ಭೂಪ್ರದೇಶದ ಸ್ಥಿತಿಗೆ ಅನುಗುಣವಾಗಿ ನಿರ್ಮಿಸದಿರುವುದರಿಂದ ಅವುಗಳ ಮೂಲಕ ನೀರು ಸರಿಯಾಗಿ ಹರಿದುಹೋಗುತ್ತಿಲ್ಲ. ಇದರಿಂದ ಹಲವು ಕಡೆ ಕೃತಕ ನೆರೆ ಉಂಟಾಗುತ್ತಿದೆ. ಸಂಗ್ರಹವಾದ ನೀರು ಹೆದ್ದಾರಿಯ ಮೇಲೆ ಹರಿಯುವುದಲ್ಲದೆ ಪಕ್ಕದ ಮನೆ, ಅಂಗಡಿ, ರಸ್ತೆಗಳಿಗೆ ನುಗ್ಗುತ್ತಿದೆ. ಇವೆಲ್ಲದರಿಂದ ಹೆದ್ದಾರಿಯಲ್ಲಿ ದೊಡ್ಡ ಗಾತ್ರದ ಗುಂಡಿಗಳು ಕಾಣಿಸಿಕೊಂಡಿವೆ. ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ. ಕಾಮಗಾರಿಯ ಮೇಲೆ ನಿಗಾ ಇಡಬೇಕಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ ವಹಿಸಿದಂತೆ ಕಂಡುಬರುತ್ತಿದೆ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ತಕ್ಷಣ ಗಮನ ಹರಿಸಿ, ಸುಗಮ ಸಂಚಾರಕ್ಕೆ ಮತ್ತು ಅಪಾಯ ತಡೆಗಟ್ಟುವುದಕ್ಕೆ ಆದ್ಯತೆ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.