ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣ ಭಾಗದ ಮಹಿಳೆಯರು ಇಂದು ಸ್ವಾವಲಂಬಿ ಬದುಕು ಸಾಗಿಸುತ್ತಿದ್ದು, ಅವರ ಆರ್ಥಿಕ ಸ್ಥಿತಿ ಉತ್ತಮಗೊಂಡಿದೆ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಕೋಟದ ಮಾಂಗಲ್ಯ ಮಂದಿರದಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬ್ರಹ್ಮಾವರ ತಾಲ್ಲೂಕು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಟಿಗೆ ಚಾಲನೆ ನೀಡಿ ಮಾತನಾಡಿದರು. ಮದ್ಯವರ್ಜನ ಶಿಬಿರ, ಮದಗಗಳ ಅಭಿವೃದ್ಧಿ ಮುಂತಾದ ಅನೇಕ ಜನಪರ ಯೋಜನೆಗಳು ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯ ಅನೇಕ ಯೋಜನೆಗಳು ಮಹಿಳೆಯರಿಗಾಗಿ ಇದ್ದು, ಅದು ಅವರ ಸಬಲೀಕರಣಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಕೋಟ ಅಮೃತೇಶ್ವರಿ ದೇವಸ್ಥಾನದ ಅಧ್ಯಕ್ಷ ಆನಂದ ಸಿ. ಕುಂದರ್ ಮಾತನಾಡಿ, ಗಾಂಧಿಜೀಯವರ ರಾಮರಾಜ್ಯದ ಕನಸು ಇಂದು ವೀರೇಂದ್ರ ಹೆಗ್ಗಡೆ ಅವರ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಗುತ್ತಿದೆ. ಯೋಜನೆಯ ಅನೇಕ ತರಬೇತಿ, ಮಾಹಿತಿ ಕಾರ್ಯಕ್ರಮಗಳಿಂದ ಮಹಿಳೆಯರು ತಮ್ಮ ಕಾಲಮೇಲೆ ನಿಲ್ಲುವಂತಾಗಿದೆ ಎಂದು ಹೇಳಿದರು.
ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಉಡುಪಿ ದೊಡ್ಡಣಗುಡ್ಡೆ ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಒತ್ತಡ ನಿರ್ವಹಣೆಯೊಂದಿಗೆ ಯಶಸ್ವಿ ಹೆಜ್ಜೆಯತ್ತ ಮಹಿಳೆ ವಿಷಯದ ಬಗ್ಗೆ ಮಾತನಾಡಿದರು.
ಇದೇ ಸಂದರ್ಭ ಜ್ಞಾನವಿಕಾಸ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಪರಿಸರದ ಹಿರಿಯ ಮಹಿಳೆಯರಾದ ಚಿತ್ರಪಾಡಿಯ ಪ್ರೇಮಾ, ಪದ್ದು, ನರಸಿ ಮತ್ತು ಗಿರಿಜಾ ಅವರನ್ನು ಗೌರವಿಸಲಾಯಿತು.
ಬ್ರಹ್ಮಾವರ ತಾಲ್ಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ಪ್ರಕಾಶ ಶೆಟ್ಟಿ, ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ರಮೇಶ ಪಿ.ಕೆ ಇದ್ದರು. ಯೋಜನೆಯ ಶ್ರೀಲಕ್ಷ್ಮೀ ಪ್ರಭು ಸ್ವಾಗತಿಸಿದರು. ಜ್ಞಾನವಿಕಾಸ ಯೋಜನೆಯ ತಾಲ್ಲೂಕು ಸಮನ್ವಯಾಧಿಕಾರಿ ಪುಷ್ಪಲತಾ ವರದಿ ವಾಚಿಸಿದರು. ವಲಯ ಮೇಲ್ವಿಚಾರಕ ನಾಗೇಶ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿ ಗುಲಾಬಿ ಬಂಗೇರ ವಂದಿಸಿದರು.















