ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕರ್ನಾಟಕದ ಇಂದಿನ ಪರಿಸ್ಥಿತಿ ತುಂಬಾ ಗೊಂದಲಮಯವಾದುದು. ನಮ್ಮ ಮುಂದಿನ ಜನಾಂಗ ಆಂಗ್ಲ ಭಾಷೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ದಕ್ಷಿಣ ಭಾರತದ ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಪರಿಸ್ಥಿತಿ ಚಿಂತಾಜನಕವಾಗಿದೆ. ಕನ್ನಡ ನಾಡಿನಲ್ಲೇ ಕನ್ನಡವನ್ನು ಉಳಿಸುವ ಪ್ರಮೇಯ ಬಂದೊದಗಿದೆ ಎಂದು ಅಂಕಣಕಾರ ನರೇಂದ್ರ ರೈ ದೇರ್ಲ ಹೇಳಿದರು.
ಕೋಟೇಶ್ವರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಕೋಟೇಶ್ವರ ಹೋಬಳಿ ಘಟಕ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು ಇಂದು ಆಹಾರ, ಶಿಕ್ಷಣ, ಯುದ್ದ, ಗಾಳಿ ಎಲ್ಲವೂ ವ್ಯಾಪಾರಿಕರಣವಾಗಿದೆ. ಜಾಗತೀಕರಣದಿಂದ ಭಾಷೆಗೆ ಇಂತಹ ಪರಿಸ್ಥಿತಿ ಬಂದಿದೆ ಎನ್ನುವುದು ಕಲ್ಪನೆಗೆ ಸರಿಯಲ್ಲ ಎಂದರು.
ಕೋಟ ಗೀತಾನಂದ ಪೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಆಂಗ್ಲ ಭಾಷೆ ವೈಭವೀಕರಣದಿಂದ ಕನ್ನಡ ಭಾಷೆ ಅಪಾಯದ ಅಂಚಿನಲ್ಲಿದೆ. ನಮ್ಮ ಭಾಷೆ ಉಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲಿಷ್ ಜತೆಗೆ ಕನ್ನಡ ಕಡ್ಡಾಯಗೊಳಿಸುವ ಕೆಲಸವಾಗಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಕೋಟೇಶ್ವರ ಹೋಬಳಿ ಘಟಕ ಅಧ್ಯಕ್ಷ ಅಶೋಕ ತೆಕ್ಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕೋಟೇಶ್ವರ ಸರಕಾರಿ ಪದವಿಪೂರ್ವ ಕಾಲೇಜ್ ಪ್ರಾಂಶುಪಾಲ ಆರ್.ಬಿ. ನಾಯಕ್, ಉಡುಪಿ ಜಿಲ್ಲಾ ಕಸಾಪ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ ಉಪಸ್ಥಿತರಿದ್ದರು.
ಕುಂದಾಪುರ ತಾಲೂಕ್ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸುಬ್ರಮಣ್ಯ ಭಟ್ ಕನ್ನಡ ಬಾವುಟವನ್ನು ಅಶೋಕ ತೆಕ್ಕಟ್ಟೆ ಅವರಿಗೆ ಹಸ್ತಾಂತರಿಸಿದರು. ಪದಾಧಿಕಾರಿಗಳಿಗೆ ನೀಲಾವರ ಸುರೇಂದ್ರ ಅಡಿಗ ಪ್ರತಿಜ್ಞಾ ವಿಧಿ ಬೋಧಿಸಿದರು. ಆಕಾಶವಾಣಿ ಕಲಾವಿದ ಗಣೇಶ ಗಂಗೊಳ್ಳಿ ನಾಡಗೀತೆ ಹಾಡಿದರು. ಉದಯ ಗಾಂವ್ಕರ್ ಸ್ವಾಗತಿಸಿದರು. ಅಕ್ಷಯ ಹೆಗ್ಡೆ ನಿರೂಪಿಸಿದರು.