ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಟ ಪೊಲೀಸರು ನಡೆಸಿದ ಕಾರ್ಯಾಚರಣೆಯ ವೇಳೆ ಬಹುಕಾಲದಿಂದ ಉಡುಪಿ ಜಿಲ್ಲೆಯ ಹಲವಾರು ಜಾಗಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಓರ್ವನನ್ನು ಸುಮಾರು 1 ಕೆಜಿ 700 ಗ್ರಾಂ ಗಾಂಜಾ ಸಹಿತ ಬಂಧಿಸಿದ್ದಾರೆ. ಕೋಟ ಮೂರು ಕೈ ಬಳಿಯ ಮಾರಿಗುಡಿ ದೇವಸ್ಥಾನದ ಬಳಿ ಆರೋಪಿಯನ್ನು ಮಾಲು ಸಹಿತ ಅಪರಾಧಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಗುಲ್ಬರ್ಗಾ ಮೂಲದ ಭೀಮಶಂಕರ್ (50) ಎಂಬಾತನೇ ಗಾಂಜಾ ಸರಬರಾಜು ಮಾಡುತ್ತಿದ್ದ ಸಮಯದಲ್ಲಿ ಸಿಕ್ಕಿಬಿದ್ದಾತ. ಸುಮಾರು 2 ವರ್ಷಗಳಿಂದ ಕೋಟದ ಪಡುಕರೆ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಈತ ಕುಂದಾಪುರ, ಕೋಟೇಶ್ವರ, ಮಣಿಪಾಲ ಮೊದಲಾದ ಕಡೆ ಗಾಂಜಾ ಸರಬರಾಜು ಮಾಡುತ್ತಿದ್ದ. ಗಾಂಜಾ ಸರಬರಾಜು ವಿಚಾರದಲ್ಲಿ ಬಹುಕಾಲದಿಂದ ಬೆನ್ನು ಹತ್ತಿದ್ದ ಕೋಟ ಉಪ ನಿರೀಕ್ಷಕ ಕಬ್ಬಾಳ್‌ರಾಜ್ ಎಚ್.ಡಿ. ಅವರು ಸೋಮವಾರದಂದು ತಮ್ಮ ಸಿಬ್ಬಂದಿಗಳೊಂದಿಗೆ ಮಾಹಿತಿ ಹಿಡಿದು ತೆರಳುತ್ತಿದ್ದಾಗ, ಸಾಲಿಗ್ರಾಮದಿಂದ ಬಸ್‌ನಿಂದ ಇಳಿದು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅನುಮಾನಸ್ಪದವಾಗಿ ಕೈಯಲ್ಲಿ ಚೀಲ ಹಿಡಿದು ನಡೆದು ಸಾಗುತ್ತಿದ್ದ ಭೀಮ ಶಂಕರ್ ಅವನನ್ನು ವಶಕ್ಕೆ ಪಡೆದು ವಿಚಾರಿಸಿ, ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ/ಕುಂದಾಪ್ರ ಡಾಟ್ ಕಾಂ ಸುದ್ದಿ/