ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಿರಂತರ ಹೊಸತನದ ಹುಡುಕಾಟದಲ್ಲಿರುವ ಗೀತಕಾರ, ಶಿಕ್ಷಕ, ಲೇಖಕ ರವೀಂದ್ರ ಪಿ. ಬೈಂದೂರು ರಚನೆಯ ಪರಿಸರ ಕಾಳಜಿಯ ಗೀತೆಗಳ ’ಹಸಿರೇ ಜೀವನ’ ಧ್ವನಿಸುರುಳಿಯನ್ನು ಇತ್ತಿಚಿಗೆ ಮಂಗಳೂರಿನ ಪುರಭವನದಲ್ಲಿ ನಡೆದ ಅರಣ್ಯ ಇಲಾಖೆಯ ಕೋಟಿ ವೃಕ್ಷ ಆಂದೋಲನದಲ್ಲಿ ಅರಣ್ಯ ಸಚಿವ ರಮಾನಾಥ ರೈ ಬಿಡುಗಡೆಗೊಳಿಸಿದರು.
ರವಿಂದ್ರರ ಪರಿಸರ ಕಾಳಜಿಯನ್ನು ಪ್ರಶಂಸಿಸಿದ ಸಚಿವರು, ಅರಣ್ಯ ರಕ್ಷಣೆ ಮತ್ತು ಅದರ ಮಹತ್ವವನ್ನು ಗೀತೆಗಳ ರೂಪದಲ್ಲಿ ಸಮಾಜಕ್ಕೆ ತಿಳಿಯಪಡಿಸುವ ಕಾರ್ಯ ಶ್ಲಾಘನೀಯವಾದುದು ಎಂದು ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮೇಯರ್ ಹರಿನಾಥ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಮೊದೀನ್ ಬಾವಾ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ವಲಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ. ಮುಂತಾದವರು ಹಾಜರಿದ್ದರು.
ಭಕ್ತಿಯಿಂದ ಭಾವದೆಡೆಗೆ, ಭಾವದಿಂದ ಪರಿಸರದೆಡೆಗೆ ಸಾಗುತ್ತಿರುವ ಗೀತಕಾರ ರವೀಂದ್ರ ಪಿ ಅವರು ಈವರೆಗೆ ಸುಮಾರು ಇನ್ನೂರಿಪ್ಪತ್ತು ಗೀತೆಗಳನ್ನು ರಚಿಸಿದ್ದು ಇವುಗಳಲ್ಲಿ ಐವತ್ತರಷ್ಟು ಧ್ವನಿಸುರುಳಿಯಾಗಿದೆ.