ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರುತ್ತಿದೆ. ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ. ರೈತರ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿರುವುದಲ್ಲದೇ ಜನಸಮಾನ್ಯರು ಕಂಗಾಲಾಗಿದ್ದಾರೆ. ಚುನಾವಣೆಯ ಪೂರ್ವದಲ್ಲಿ ಕೇಂದ್ರ ಸರಕಾರ ನೀಡಿದ ಆಶ್ವಾಸನೆಗಳನ್ನು ಈಡೇರಿಸದೆ ಅನ್ಯಾಯವೆಸಗುತ್ತಿದೆ ಎಂದು ಆರೋಪಿಸಿ ಸಿಪಿಐ(ಎಂ) ಕುಂದಾಪುರ ಹಾಗೂ ಬೈಂದೂರು ವಲಯ ಸಮಿತಿ ನೇತೃತ್ವದಲ್ಲಿ ಇಲ್ಲಿನ ಶಾಸ್ತ್ರೀ ವೃತ್ತದ ಬಳಿ ಪ್ರತಿಭಟನೆ ನಡೆಯಿತು.
ಶಾಸ್ತ್ರೀ ವೃತ್ತದಿಂದ ಕುಂದಾಪುರ ಮಿನಿವಿಧಾನಸೌಧದ ವರೆಗೆ ಪ್ರತಿಭಟನೆಯಲ್ಲಿ ಸಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಹಶೀಲ್ದಾರರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಸಿಪಿಐ(ಎಂ) ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಕೆ. ಶಂಕರ್, ಸಿಪಿಐ(ಎಂ) ಕುಂದಾಪುರ ವಲಯ ಕಾರ್ಯದರ್ಶಿ ಎಚ್. ನರಸಿಂಹ, ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ್, ವೆಂಕಟೇಶ ಕೋಣಿ, ಮಹಾಬಲ ವಡೇರಹೊಬಳಿ, ರಾಜೀವ ಪಡುಕೋಣೆ, ಸುಬ್ರಹ್ಮಣ್ಯ ಆಚಾರ್, ಸಂತೋಷ್ ಹೆಮ್ಮಾಡಿ, ನಾಗರತ್ನ ನಾಡ ಮೊದಲಾದವರು ಭಾಗವಹಿಸಿದ್ದರು.