ಕುಂದಾಪ್ರ ಡಾಟ್ ಕಾಂ ಸುದ್ದಿ.
ಕಾರ್ಕಳ: ಕನ್ನಡ ಸಾಹಿತ್ಯ ಪರಿಷತ್ ಅಜೆಕಾರು ಹೋಬಳಿ ಅಧ್ಯಕ್ಷರಾಗಿ ಪತ್ರಕರ್ತ, ಸಾಹಿತಿ, ಸಂಘಟಕ ಶೇಖರ ಅಜೆಕಾರು ಅವರು ಆಯ್ಕೆಯಾಗಿದ್ದಾರೆ.
ಪತ್ರಿಕೋದ್ಯಮ, ಸಾಹಿತ್ಯ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡು, ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗುರುತಿಸಿಕೊಂಡ ಅಜೆಕಾರು ಅವರು, ವ್ಯಕ್ತಿಗಳು ಹಾಗೂ ಊರಿನ ಪರಿಚಯ ಸೇರಿದಂತೆ ಸುಮಾರು ಹದಿನೈದಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅವರು ಕುಂದಪ್ರಭ ಪತ್ರಿಕೆಯಿಂದ ಆರಂಭಿಸಿ ಕನ್ನಡಮಲ್ಲ, ಜನವಾಹಿನಿ, ಕನ್ನಡಪ್ರಭ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಸುದ್ದಿ ಸಂಪಾದಕರಾಗಿ, ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಾಮೋತ್ಸವ, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಹಿತ್ಯ, ಸಂಘಟನಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಅಜೆಕಾರು ಹೋಬಳಿ ಕಸಾಪ ಅಧ್ಯಕ್ಷರಾಗಿ ಆಯ್ಕೆಗೊಂಡ ಶೇಖರ ಅಜೆಕಾರು ಅವರಿಗೆ ಕುಂದಾಪ್ರ ಡಾಟ್ ಕಾಂ ಅಭಿನಂದನೆಗಳನ್ನು ಸಲ್ಲಿಸುತ್ತದೆ.