ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಾಲು ಸಂಗ್ರಹದಲ್ಲಿ ಕುಂದಾಪುರ ತಾಲೂಕು ಎರಡನೇ ಸ್ಥಾನ ಪಡೆದಿದೆ. ಕರಾವಳಿ ಭಾಗದಲ್ಲಿ ಹೈನುಗಾರರ ಸಂಖ್ಯೆ ಅಧಿಕವಾಗಿದ್ದು 4.25 ಲಕ್ಷ ಲೀ. ಹಾಲಿನ ಸಂಗ್ರಹದಲ್ಲಿ ದಾಖಲೆ ಸಾಧಿಸಿದ್ದೇವೆ. ಈ ಭಾಗದ ಹೈನುಗಾರರಿಂದ ಉತ್ತಮ ಸಹಕಾರ ದೊರೆಯುತ್ತಲೇ ಬಂದಿದೆ ಎಂದು ದ.ಕ. ಹಾಲು ಉತ್ಪಾದಕರ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು.
ಇಲ್ಲಿನ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದಿಂದ ಕುಂದಾಪುರ ತಾಲೂಕು ಮಟ್ಟದ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದಲ್ಲಿರುವ ಒಟ್ಟು 14 ಒಕ್ಕೂಟದಲ್ಲಿ ನಮ್ಮ ಒಕ್ಕೂಟದಿಂದ ಹೈನುಗಾರರಿಗೆ ಹೆಚ್ಚಿನ ಡಿವಿಡೆಂಡ್ ನೀಡಲಾಗುತ್ತಿದೆ. ಹಾಲಿನ ಉತ್ಪಾದನೆ ಶೇ.೨೧ ರಷ್ಟು ಹೆಚ್ಚಾಗುತ್ತಿದೆ. ಒಕ್ಕೂಟದಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ,ಹಾಲಿನ ಉತ್ಪಾದನೆಯಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾದಿಸಲಿದ್ದೇವೆ ಎಂದರು.
ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ. ಸತ್ಯನಾರಾಯಣ, ಒಕ್ಕೂಟದ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ಜಾನಕಿ ಹಂದೆ, ಅಶೋಕ್ ಕುಮಾರ್ ಶೆಟ್ಟಿ , ಸೂರ್ಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ದ.ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಜಗದೀಶ ಕಾರ್ಯಕ್ರಮ ನಿರ್ವಹಿಸಿದರು. ತಾಲೂಕು ಮಟ್ಟದ ಹೈನುಗಾರರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಸಭೆಯಲ್ಲಿ ತಾಲೂಕಿನ ಎಲ್ಲ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದರು.