ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ ಟ್ಯಾಂಕರೊಂದು ಅಂಗಡಿಗೆ ನುಗ್ಗಿದ ಪರಿಣಾಮ ಅಂಗಡಿ ಜಗಲಿಯಲ್ಲಿ ಕೂತಿದ್ದ ವ್ಯಕ್ತಿ ಮೃತಪಟ್ಟ ಘಟನೆ ವರದಿಯಾಗಿದೆ. ಮಣೂರು ಬಾಳೆಹಿತ್ಲು ನಿವಾಸಿ ಅಣ್ಣಪ್ಪ ಪೂಜಾರಿ (60) ಮೃತಪಟ್ಟವರು. ತೆಕ್ಕಟ್ಟೆ ಕಂಚುಗಾರಬೆಟ್ಟು ನಿವಾಸಿಗಳಾದ ಮಂಜುನಾಥ, ಸುರೇಶ್, ಗೋಪಾಲ ಗಂಭೀರ ಗಾಯಗೊಂಡು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಟೆಂಪೋ ಕೆಟ್ಟು ನಿಂತಿದ್ದು, ಮಂಗಳೂರಿಗೆ ತೆರಳುತ್ತಿದ್ದ ಟ್ಯಾಂಕರ್ ಎದುರು ಬರುತ್ತಿದ್ದ ವಾಹನ ತಪ್ಪಿಸಲು ಬ್ರೇಕ್ ಹಾಕಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕೆಟ್ಟು ನಿಂತಿದ್ದ ಟೆಂಪೋಗೆ ಢಿಕ್ಕಿ ಹೊಡೆದು ಮೂರ್ನಾಲ್ಕು ಅಂಗಡಿಗಳ ಮಾಡು ಭೇದಿಸಿ, ನಂತರ ಬಟ್ಟೆ ಅಂಗಡಿ ಮುಂಭಾಗಾಕ್ಕೆ ಡಿಕ್ಕಿ ಹೊಡೆದು ನಿಂತಿತು.
ಕಲ್ಲು ಕೆತ್ತುವ ಕೆಲಸ ಮಾಡುತ್ತಿದ್ದ ಅಣ್ಣಪ್ಪ ಪೂಜಾರಿ ಪ್ರತಿದಿನ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಅಂಗಡಿಯಲ್ಲಿ ಕೂತು, ನಂತರ ಕೆಲಸಕ್ಕೆ ತೆರಳುತ್ತಿದ್ದರು. ಇನ್ನಿತರ ಕಾರ್ಮಿಕರು ಕೂಡ ಅಲ್ಲೇ ಕುಳಿತು, ಹೋಗುತ್ತಿದ್ದರು.
ಅಣ್ಣಪ್ಪ ಪೂಜಾರಿ ಮೃತಪಟ್ಟಿರುವುದು ಅರ್ಧ ಗಂಟೆ ಬಳಿಕ ಗೊತ್ತಾಗಿದೆ. ಟ್ಯಾಂಕರ್ ಅಂಗಡಿ ಹೊಕ್ಕಿದ್ದರಿಂದ ಮಣ್ಣಿನ ಅಡಿ ಅಣ್ಣಪ್ಪ ಪೂಜಾರಿ ದೇಹ ಇರುವುದು ಯಾರ ಗಮನಕ್ಕೂ ಬಂದಿರಲಿಲ್ಲ. ಮೃತದೇಹದ ಪಾದ ಮಾತ್ರ ಮೇಲ್ಗಡೆ ಕಾಣಿಸಿದ್ದರಿಂದ ಮಣ್ಣಿನ ಅಡಿ ಯಾರೋ ಇದ್ದಾರೆಂಬ ಶಂಕೆ ವ್ಯಕ್ತಪಡಿಸಿದ ಸ್ಥಳೀಯರು ಹಾಗೂ ಕೋಟ ಪೊಲೀಸರು ಮಣ್ಣನ್ನು ಹಾಗೂ ಕೆಳಗೆ ಬಿದ್ದ ಮಾಡಿನ ಅವಶೇಷ ತೆಗೆದು ನೋಡಿದಾಗ ಅಣ್ಣಪ್ಪ ಪೂಜಾರಿ ಮೃತದೇಹ ಪತ್ತೆಯಾಗಿದೆ. ಮೃತ ಅಣ್ಣಪ್ಪ ಪೂಜಾರಿ ಮಗ ಕೆಲಸ ನಿರ್ವಹಿಸುತ್ತಿದ್ದ ಬಟ್ಟೆ ಅಂಗಡಿ ಎದುರೇ ಮೃತಪಟ್ಟಿರುವುದ ದುರಂತ. ಸ್ಥಳಕ್ಕೆ ಕೋಟ ಪೊಲೀಸರು ಆಗಮಿಸಿ ಟ್ಯಾಂಕರ್ ಚಾಲಕ ಹಾಗೂ ನಿರ್ವಾಹಕ ವಶಕ್ಕೆ ಪಡೆದಿದ್ದು, ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.