ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ನಾಡ ಗ್ರಾಮದಿಂದ ವಿವಿಧೆಡೆಗಳಿಗೆ ಸಂಧಿಸುವ ರಸ್ತೆಗಳು ಹದಗೆಟ್ಟಿದ್ದು ಶೀಘ್ರವೇ ದುರಸ್ತಿಗೊಳಿಸುವಂತೆ ಆಗ್ರಹಿಸಿ ನಾಡ ಪೇಟೆಯಲ್ಲಿ ನಾಗರೀಕರು ಪ್ರತಿಭಟನೆ ನಡೆಸಿದರು.
ನಾಡ ಗ್ರಾ.ಪಂ ವ್ಯಾಪ್ತಿಯ ಮೂಲಕ ಕೋಣ್ಕಿ, ಬಡಾಕೆರೆ, ಗುಡ್ಡೆ ಹೋಟೆಲ್ ಹಾಗೂ ಗುಜ್ಜಾಡಿಗೆ ಸೇರುವ ರಸ್ತೆಗಳು ತೀರಾ ದುಸ್ತರವಾಗಿದ್ದು ಸಂಚಾರಕ್ಕೆ ತೋಡಕಾಗುತ್ತಿದೆ. ಈ ಭಾಗದಲ್ಲಿ ಸುಮಾರು 600ಕ್ಕೂ ಅಧಿಕ ಮನೆಗಳಿದ್ದು ಜನರು ಹೊಂಡಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ತಿರುಗಾಡುವುದು ಕಷ್ಟಸಾಧ್ಯವಾಗುತ್ತಿದೆ. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳ ಇದೇ ಮಾರ್ಗವಾಗಿ ಶಾಲಾ ಕಾಲೇಜಿಗೆ ತೆರಳುತ್ತಿದ್ದು ಕೆಲವು ಮಾರ್ಗಗಳಲ್ಲಿ ಬಸ್ ವ್ಯವಸ್ಥೆಯೂ ಇಲ್ಲದಿರುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆ ಸಮಸ್ಯೆಯ ಬಗೆಗೆ ಗಮನ ಹರಿಸಬೇಕೆಂದು ಪ್ರತಿಭಟನಾ ನಿರತರ ಪರವಾಗಿ ಮಾತನಾಡಿದ ಮಾಜಿ ಗ್ರಾಪಂ ಸದಸ್ಯ ಸತೀಶ್ ನಾಯ್ಕ್ ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಬೈಂದೂರು ಶಾಸಕ ಗೋಪಾಲ ಪೂಜಾರಿ ಪ್ರತಿಭಟನಾಕಾರರನ್ನುಉದ್ದೇಶಿಸಿ ಮಾತನಾಡಿ ರಸ್ತೆಗಳ ದುರಸ್ತಿಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಪ್ರತಿಭಟನಾಕಾರರು ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಮನವಿ ಸಲ್ಲಿಸಿದರು. ನಾಡ ಗ್ರಾಪಂ ಅಧ್ಯಕ್ಷೆ ಜಡವೇರಿ ಒಲವೆರಾ, ಪಂಚಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಹಾಜರಿದ್ದರು.
ಪ್ರವೀಣಕುಮಾರ್ ಶೆಟ್ಟಿ ಹೆಮ್ಮಂಜೆ, ರಾಘವೇಂದ್ರ ಮೆಂಡನ್ ಕೋಣ್ಕಿ, ಉದಯ ಪೂಜಾರಿ, ಸುದರ್ಶನ್ ಶೆಟ್ಟಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ ಬಂದೋವಸ್ತ್ ಏರ್ಪಡಿಸಿದ್ದರು.