ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರಾವಳಿಯ ಬಹುದೊಡ್ಡ ಹಬ್ಬವಾದ ನಾಗರಪಂಚಮಿಯನ್ನು ಕುಂದಾಪುರ ತಾಲೂಕಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆನಿಂದಲೇ ನಾಗಬನ, ಹಾಗೂ ತಾಲೂಕಿನ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳು ನಾಗನಿಗೆ ಹಾಲು, ಏಳನೀರು, ಕೇದಿಗೆ ಹೂವನ್ನು ಸಮರ್ಪಿಸಿ ಪುನೀತರಾದರು.
ತಾಲೂಕಿನ ಪ್ರಸಿದ್ಧ ದೇವಾಲಯವಾದ ಗುಡ್ಡಮ್ಮಾಡಿ, ಕಾಳಾವರ, ಉಳ್ಳೂರು ಕಾರ್ತಿಕೇಯ ದೇವಸ್ಥಾನ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜಾವಿಧಿಗಳು ನೆರವೇರಿದರು. ಸೇನಾಪುರ ಗ್ರಾಮದ ಗುಡ್ಡಾಮ್ಮಾಡಿಯಲ್ಲಿ ಹಾಲುಹಿಟ್ಟು ಸೇವೆ, ಅಭಿಷೇಕ ಹಾಗೂ ವಿಶೇಷ ಪೂಜೆ ನಡೆಯಿತು. ಭಟ್ಕಳ, ಬೈಂದೂರು, ಕುಂದಾಪುರದಿಂದ ನೂರಾರು ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ಭಕ್ತಾದಿಗಳಿಗೆ ನೈವೇದ್ಯದ ಪ್ರಸಾದ ವಿತರಣೆ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಕುಂದಾಪ್ರ ಡಾಟ್ ಕಾಂ.
ಬೈಂದೂರಿನ ಸೋಮೇಶ್ವರದಲ್ಲಿನ ದೇವಸ್ಥಾನದಲ್ಲಿನ ನಾಗಬನ, ಕುಂದಾಪುರದ ಭಟ್ರಹಾಡಿಯ ನಾಗಬನ, ರೋಯಲ್ ಸಭಾಭವನದ ಬಳಿಯ ನಾಗಬನ ಸೇರಿದಂತೆ ಎಲ್ಲಾ ನಾಗಬನದಲ್ಲಿಯೂ ನಾಗನಿಗೆ ವಿಶೇಷಪೂಜೆ ಸಲ್ಲಿಸಲಾಯಿತು.