ಬಸ್ ರೂಟ್ ಸರಿಮಾಡಿ. ಸಿಆರ್‌ಝಡ್ ಸಮಸ್ಯೆ ಬಗೆಹರಿಸಿ.
ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ತಾಪಂ ಸಭೆಯಲ್ಲಿ ವಿವಿಧ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳಿದ್ದರೂ, ಉತ್ತರಿಸಬೇಕಾದ ಅಧಿಕಾರಿಗಳು ಮಾತ್ರ ಸತತವಾಗಿ ಗೈರು ಹಾಜರಾಗಿ ಬೇಜವಾಬ್ದಾರಿ ತೋರುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ಉತ್ತರಿಸಲಾಗದವರು ಜನಸಾಮಾನ್ಯರಿಗೆ ಉತ್ತರಿಸುವರೇ? ಸಭೆಗೆ ಗೈರಾಗುವ ಅಧಿಕಾರಿಗಳು ಹಿಂಬಡ್ತಿ ಪಡೆದು ಸುಮ್ಮನೆ ಕೂರಲಿ ಅಥವಾ ಅಂತಹ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳವ ಕೆಲಸವಾಗಲಿ.
ಇದು ಬುಧವಾರ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಗೈರಾಗುತ್ತಿರುವ ವಿರುದ್ದ ಸದಸ್ಯರು ತಮ್ಮ ಆಕ್ರೋಶ ಹೊರಗೆಡವಿದ ಪರಿ ಸಾಮಾನ್ಯ ಸಭೆಯಲ್ಲಿ ಪ್ರಮುಖ ಸಮಸ್ಯೆಗಳಿಗೆ ಉತ್ತರಿಸಬೇಕಾಗಿದ್ದ ನಾಲ್ಕು ಇಲಾಖಾ ಅಧಿಕಾರಿಗಳು ಗೈರು ಹಾಜರಾಗಿ ಕರ್ತವ್ಯಲೋಪವೆಸಗುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಪಂ ಸದಸ್ಯರಾದ ವಾಸುದೇವ ಪೈ, ಪುಪ್ಪರಾಜ್ ಶೆಟ್ಟಿ, ಜ್ಯೋತಿ ಪುತ್ರನ್ ಉಮೇಶ್ ಶೆಟ್ಟಿ ಕಲ್ಗದ್ದೆ ಹಾಗೂ ಸುರೇಂದ್ರ ಖಾರ್ವಿ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ತಾಪಂ ಕಾರ್ಯನಿರ್ವಹಣಾಧಿಕಾರಿ, ಗೈರಾಗುವ ಅಧಿಕಾರಿಗಳ ಶಿಸ್ತುಕ್ರಮ ಜರುಗಿಸುವಂತೆ ಮೇಲಾಧಿಕಾರಿಗಳಿಗೆ ನೇರವಾಗಿ ಪತ್ರ ಬರೆಯಲಾಗುವುದು ಎಂದು ಭರವಸೆಯಿತ್ತರು.
ಕುಂದಾಪುರ ಹಾಲಾಡಿ ಶಂಕರನಾರಾಯಣ ಸಿದ್ಧಾಪುರವರೆಗೆ ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಅವರ ಪ್ರಯತ್ನದ ಫಲವಾಗಿ ಸರಕಾರಿ ಬಸ್ಸು ಸಂಚರಿಸುತ್ತಿದ್ದರೂ ರೂಟ್ ಮ್ಯಾಪ್ ಸರಿಯಾಗಿಲ್ಲದ್ದರಿಂದ ವಿದ್ಯಾರ್ಥಿಗಳಿಗೆ ಹಾಗೂ ನಾಗರಿಕರಿಗೆ ಇದರ ಉಪಯೋಗ ದೊರೆಯುತ್ತಿಲ್ಲ. ಹಾಲಾಡಿ ಮೂಲಕ ಸಿದ್ಧಾಪುರಕ್ಕೆ ಸಂಚರಿಸುತ್ತಿರುವ ಬದಲಿಗೆ ಬಸ್ರೂರು ಮೂಲಕ ಅಂಪಾರು, ಕ್ರೋಡಬೈಲೂರು, ಶಂಕರನಾರಾಯಣ ಮೂಖಾಂತರ ಸಿದ್ಧಾಪುರಕ್ಕೆ ಸಂಚರಿಸಿದರೇ ಹೆಚ್ಚು ಅನುಕೂಲವಾಗಲಿದೆ. ಇಲಾಖೆ ಇದನ್ನು ಗಂಬೀರವಾಗಿ ಪರಿಗಣಿಸಿ ಕ್ರಮಕ್ಕೆ ಮುಂದಾಗಬೇಕು ಎಂದು ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಆಗ್ರಹಿಸಿದರು.
ಇದಕ್ಕೆ ಪೂರಕವಾಗಿ ಮಾತನಾಡಿದ ತಾಪಂ ಸದಸ್ಯ ರಾಜು ದೇವಾಡಿಗ, ಹಿಂದೆ ಹೊಸ್ಕೇಟೆ ಕಂಚಿಕಾನ್ ಮಾರ್ಗವಾಗಿ ಗಂಗೊಳ್ಳಿಗೆ ಹೋಗುತ್ತಿದ್ದ ಬಸ್ ಪತ್ತೆಯಿಲ್ಲ. ಆ ಮಾರ್ಗದಲ್ಲಿಯೂ ಸರಕಾರಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡುವುದು ಒಳಿತು ಎಂದಿರೇ, ಉಪ್ಪುಂದ ಶಾಲೆಬಾಗಿಲಿನಿಂದ ಅಳುವೆಕೋಡಿಯವರೆಗೆ ಸರಕಾರಿ ಬಸ್ ಓಡಿಸಿದರೇ ಜನರಿಗೆ ಅನುಕೂಲವಾಗಲಿದೆ ಎಂದರು.
ಈಗಾಗಲೇ ಮಂಜೂರಾಗಿರುವ ರೂಟ್‌ಮ್ಯಾಪ್ ಬದಲಿಸಲು ಇಲಾಖೆಗೆ ಸಾಧ್ಯವಿಲ್ಲ. ಆದರೆ ಕೆಎಸ್‌ಆರ್‌ಟಿಸಿ ಅಗತ್ಯವಿರುವಲ್ಲಿ ಬಸ್ ಬಿಡಲು ಮುಂದಾದರೇ ಆರ್‌ಟಿಓ ಸಭೆಯಲ್ಲಿ ಚರ್ಚಿಸಿ ಹೊಸ ರೂಟ್ ಮ್ಯಾಪ್ ಮಾಡಿಕೊಡಲಾಗುವುದು. ಈ ಹಿಂದೆ ಬೇಡಿಕೆ ಸಲ್ಲಿಸಲಾಗಿದ್ದ ಮಾರ್ಗ ಕೆಲವೆಡೆ ರೂಟ್‌ಮ್ಯಾಪ್ ಈಗಾಗಲೇ ಸಿದ್ದಗೊಂಡಿದ್ದು ಟೈಮಿಂಗ್ ಬಾಕಿಯಿದೆ ಎಂದು ಆರ್‌ಟಿಓ ಅಧಿಕಾರಿಗಳು ಉತ್ತರಿಸಿದರು.
ಸಮುದ್ರ ತೀರದ ನಿವಾಸಿಗಳಿಗೆ ಸಿಆರ್‌ಝಡ್ ಸಮಸ್ಯೆ ತೊಡಕಾಗಿ ಪರಿಣಮಿಸಿದ್ದು, ಹಲವಾರು ವರ್ಷಗಳಿಂದ ವಾಸಿಸುತ್ತಿರುವ ಅಲ್ಲಿನ ನಿವಾಸಿಗಳಿಗೆ ಮನೆ ದುರಸ್ತಿಗೊಳಿಸಲು, ಹೊಸ ಮನೆ ಕಟ್ಟಿಕೊಳ್ಳಲು ಗ್ರಾ.ಪಂನಿಂದ ಅನುಮತಿ ದೊರೆಯುತ್ತಿಲ್ಲ. ಆದರೆ ಸಿಆರ್‌ಝ್ ವ್ಯಾಪ್ತಿಯಲ್ಲಿ ಮನೆ ದುರಸ್ತಿಗೆ ಯಾವುದೇ ಅಡ್ಡಿಯಿಲ್ಲ ಎಂಬುದು ಸ್ಪಷ್ಟ ಮಾಹಿತಿಯಿದ್ದು, ಅಧಿಕಾರಿಗಳು ಈ ಸುತ್ತೋಲೆಯನ್ನು ಕನ್ನಡದಲ್ಲಿಯೇ ಮುದ್ರಿಸಿ ಗ್ರಾಮ ಪಂಚಾಯತಿಗಳಿಗೆ ಕಳುಹಿಸಬೇಕು ಎಂದು ಸದಸ್ಯ ಪುಪ್ಪರಾಜ್ ಶೆಟ್ಟಿ ಆಗ್ರಹಿಸಿದರೇ, ಇದಕ್ಕೆ ಸದಸ್ಯ ಜಗದೀಶ ಪೂಜಾರಿ ಧ್ವನಿಗೂಡಿಸಿದ್ದು ಈ ಭಾಗದಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವ ಮೂಲ ನಿವಾಸಿಗಳ ಮನೆ ದುರಸ್ತಿಗಳಿಗೆ ಅನುಮತಿ ನೀಡಬೇಕು ಆಗ್ರಹಿಸಿದರು.
ವಾರಾಹಿ ಯೋಜನೆ ಸಂದರ್ಭದಲ್ಲಿ ಅಬ್ಯಾಡಿ ಅಂಗನವಾಡಿ ಕಟ್ಟಡ ಕೆಡವಲಾಗಿದ್ದು ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಹೊಸ ಅಂಗನವಾಡಿ ಕಟ್ಟಡಕ್ಕೆ ಹಣ ಮಂಜೂರಾಗಿದ್ದರೂ ಈವರೆಗೆ ನಿರ್ಮಾಣಕ್ಕೆ ಮುಂದಾಗಿಲ್ಲ ಏಕೆ ಎಂದು ಸದಸ್ಯ ಉಮೇಶ್ ಕಲ್ಗದ್ದೆ ಪ್ರಶ್ನಿಸಿದರೇ, ಹರ್ಕೂರು ಉತ್ತರದ ಅಂಗನವಾಡಿಯಲ್ಲಿ ಎರಡೇ ಮಕ್ಕಳಿದ್ದ ಅಗತ್ಯಕ್ಕಿಂತ ಹೆಚ್ಚಿನ ಆಹಾರ ವಸ್ತುಗಳು ಬರುತ್ತಿದ್ದೆ. ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸದಸ್ಯೆ ಇಂದಿರಾ ಶೆಟ್ಟಿ ಹರ್ಕೂರು ಆಗ್ರಹಿಸಿದರು.
ಅಬ್ಯಾಡಿಯ ಹೊಸ ಅಂಗನವಾಡಿ ಕಟ್ಟಡಕ್ಕೆ ಹಣ ಮಂಜೂರಾಗಿದ್ದು ನರೇಗಾ ಯೋಜನೆಯಡಿಯಲ್ಲಿ ಶೀಘ್ರವೇ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು ಹಾಗೂ ಹರ್ಕೂರು ಉತ್ತರದ ಅಂಗನವಾಡಿ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಗಂಗೊಳ್ಳಿಯಲ್ಲಿರುವ ಪಶುಚಿಕಿತ್ಸಾಲಯವನ್ನು ಆಲೂರಿಗೆ ಸ್ಥಳಾಂತರಿಸುವ ಬಗ್ಗೆ ಸದಸ್ಯ ಸುರೇಂದ್ರ ಖಾರ್ವಿ ವಿರೋಧ ವ್ಯಕ್ತಪಡಿಸಿದ್ದು, ಗಂಗೊಳ್ಳಿಯ ಪಶುಚಿಕಿತ್ಸಾಲಯವನ್ನು ಸ್ಥಳಾಂತರಿಸದೇ, ಆಲೂರಿನಲ್ಲಿ ಹೊಸದಾಗಿ ಆರಂಭಿಸುವ ಪ್ರಸ್ತಾಪ ಮುಂದಿಡಲಾಯಿತು.
ಕುಂದಾಪುರ, ಬೈಂದೂರು, ಶಂಕರನಾರಾಯಣ ಮುಂತಾದೆಡೆ ಗ್ರಾಮ ಅರಣ್ಯ ಸಮಿತಿಯಲ್ಲಿ ಲಕ್ಷಾಂತರ ರೂ. ಹಣವಿದ್ದರೂ ವಿನಿಯೋಗವಾಗಲೇ ಬ್ಯಾಂಕ್ ಖಾತೆಯಲ್ಲಿ ಯಾಕೆ ಹಾಗೆಯೇ ಇದೆ ಎಂದು ಉಮೇಶ್ ಕಲ್ಗದ್ದೆ ಪ್ರಶ್ನೆಯ ಉತ್ತರಿಸಿದ ಶಂಕರನಾರಾಯಣ ವಲಯ ಅರಣ್ಯ ಸಂರಕ್ಷಣಾಧಿಕಾರಿ, ಈ ವರೆಗೆ ಕಾಮಗಾರಿ ಕ್ರೀಯಾಯೋಜನೆ ತಯಾರಾಗದ ಹಿನ್ನೆಯಲ್ಲಿ ಹಣ ಹಾಗೆಯೇ ಉಳಿದಿದೆ. ಸದ್ಯದಲ್ಲಿಯೇ ಕ್ರಿಯಾ ಯೋಜನೆ ತಯಾರಿಸಿ ಹಣ ಹಂಚಿಕೆ ಮಾಡಲಾಗುವುದು ಎಂದರು.
ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಜಯಶ್ರೀ ಸುಧಾಕರ ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರವೀಣಕುಮಾರ್ ಶೆಟ್ಟಿ, ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಮಚಂದ್ರ ರಾಜ್ ಅರಸ್ ಉಪಸ್ಥಿತರಿದ್ದರು.