ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಆಹಾರ ಪದ್ಧತಿ, ಒತ್ತಡ, ಆಹಾರ, ವಿಹಾರ ಮೊದಲಾದ ಅನೇಕ ಕಾರಣಗಳಿಂದ ಮನುಷ್ಯನು ವಿವಿಧ ರೀತಿಯ ಕಾಯಿಲೆಗಳು ಮತ್ತು ರೋಗಗಳಿಗೆ ತುತ್ತಾಗುತ್ತಿದ್ದಾನೆ. ಪ್ರಕೃತಿಯಲ್ಲಿ ಬೆಳೆಯುವ ಹಸಿರು ತರಕಾರಿಗಳಿಂದ ಮತ್ತು ತಾಜಾ ಆಹಾರಗಳ ಸೇವನೆಯಿಂದ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು. ನಮ್ಮ ಜೀವಕ್ಕೆ ಬೇಕಾಗುವ ಪ್ರೋಟಿನ್ ಲವಣಾಂಶಯುಕ್ತ ಆಹಾರಗಳ ನಿಮಿಯಮಿತ ಸೇವನೆಯಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್ ಹೇಳಿದರು.
ಅವರು ಗಂಗೊಳ್ಳಿಯ ಶ್ರೀ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ, ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ, ಗ್ರಾಮ ಪಂಚಾಯತ್ ಗಂಗೊಳ್ಳಿ ಇವರ ಆಶ್ರಯದಲ್ಲಿ ಕ್ರಾಂತಿವೀರರ ಅಭಿಮಾನಿ ಬಳಗ ಗಂಗೊಳ್ಳಿ ಇವರ ಸಹಕಾರದೊಂದಿಗೆ ಜರಗಿದ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಮಾತನಾಡಿದ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಜನರು ಆರೋಗ್ಯ ಬಗ್ಗೆ ಹೆಚ್ಚು ಕಾಳಜಿ ವಹಿಸುವುದರ ಜೊತೆಗೆ ಆರೋಗ್ಯಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು. ಪರಿಸರ ನೈರ್ಮಲ್ಯದ ಕಾಪಾಡಿಕೊಂಡು ಶುಚಿ ರುಚಿಯಾದ ಆಹಾರ ಸೇವನೆ ಮಾಡಬೇಕು. ಜಂಕ್ ಫುಡ್‌ಗಳನ್ನು ಸೇವಿಸದೆ ಪ್ರಕೃತಿದತ್ತ ಆಹಾರವನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಮಕ್ಕಳು ಹಾಗೂ ಗರ್ಭಿಣಿಯರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಿಕೊಳ್ಳಬೇಕು ಎಂದರು.
ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ ಡಿಸೋಜ, ಗಂಗೊಳ್ಳಿಯ ಆರೋಗ್ಯ ನಿರೀಕ್ಷಕ ಶ್ರೀಧರ ನಾಯ್ಕ್, ಪತ್ರಕರ್ತ ಬಿ.ರಾಘವೇಂದ್ರ ಪೈ, ಗಂಗೊಳ್ಳಿ ಸಿಆರ್‌ಪಿ ತಿಲೋತ್ತಮ ಮತ್ತು ಕ್ರಾಂತಿವೀರರ ಅಭಿಮಾನಿ ಬಳಗದ ಸಂಚಾಲಕ ಮಹೇಶ ಖಾರ್ವಿ ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗಂಗೊಳ್ಳಿ ಮೇಲ್ವಿಚಾರಕಿ ಪ್ರಭಾವತಿ ಶೆಡ್ತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕುಂದಾಪುರ ತಾಲೂಕು ಅಂಗನವಾಡಿ ಸಹಾಯಕಿಯರ ಸಂಘದ ಅಧ್ಯಕ್ಷೆ ಫಿಲೋಮಿನಾ ಫೆರ್ನಾಂಡಿಸ್ ವಂದಿಸಿದರು.