ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಟ ಪೊಲೀಸ್ ಠಾಣೆಗೆ ಬಂದು ಸುಮಾರು ೧ ವರೆ ವರ್ಷದ ಅವಧಿಯಲ್ಲಿ ಸಾಕಷ್ಟು ಅನುಭವಗಳಾಗಿವೆ. ಆದರೆ ಉತ್ತಮ ಸಹಕಾರ ನೀಡುವ ಮೇಲಧಿಕಾರಿಗಳು ಮತ್ತು ಸಿಬ್ಬಂದಿಗಳು ನನಗೆ ಕರ್ತವ್ಯ ನಡೆಸಲು ಸಾಕಷ್ಟು ಸಹಕಾರ ನೀಡಿದ್ದಾರೆ. ಎಲ್ಲರಿಗೂ ನನ್ನಿಂದ ಸಂತೋಷ ಸಿಕ್ಕಿದೆ ಎನ್ನುವ ಮಾತು ಹೇಳಲಾರೆ, ಒಬ್ಬರಿಗೆ ನ್ಯಾಯ ನೀಡುವ ಸಂದರ್ಭದಲ್ಲಿ ಎದರುಗಿನವರಿಗೆ ಬೇಸರವಾಗುವುದು ಸಹಜ. ಇಲಾಖೆಯ ವ್ಯಾಪ್ತಿಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಏನು ಸಾಧ್ಯವೋ ಅದೇ ರೀತಿಯಲ್ಲಿ ದಕ್ಷವಾಗಿ ಕರ್ತವ್ಯ ನಿರ್ವಹಿಸದ ಹೆಮ್ಮೆ ಇದೆ ಎಂದು ಕೋಟ ಪೊಲೀಸ್ ಠಾಣೆಯ ನಿರ್ಗಮನ ಉಪನಿರೀಕ್ಷಕ ಕಬ್ಬಾಳ್ ರಾಜ್ ಹೆಚ್.ಡಿ. ಹೇಳಿದರು.
ಅವರು ಸಂಜೆ ಕೋಟ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಲಾಗಿದ್ದ ಬಿಳ್ಕೋಡುಗೆ ಸಂದರ್ಭ ಮಾತನಾಡಿದರು. ಬ್ರಹ್ಮಾವರದ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಕಬ್ಬಾಳ್‌ರಾಜ್ ಅವರು ನೇರ ನಡೆಯ ಪೊಲೀಸ್ ಅಧಿಕಾರಿ, ಕಾನೂನು ವಿಚಾರ ಬಂದಾಗ ನಿಷ್ಠುರವಾಗಿ ಪಾಲಿಸಿಸುವ ವ್ಯಕ್ತಿ. ಇದು ಕೆಲವು ವ್ಯಕ್ತಿಗಳಿಗೆ ಸಮಸ್ಯೆಯಾಗಿರಬಹುದು, ಹೇಗೆ ದೀಪದ ಕೆಳಗೆ ಕತ್ತಲು ಇರುತ್ತದೊ ಹಾಗೇಯೆ ದಕ್ಷರೆನಿಸಕೊಂಡವರನ್ನು ದೂರುವುದು ಕೂಡ ಸಹಜ ಎಂದರು.
ಕಾರ್ಯಕ್ರಮದಲ್ಲಿ ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಸಮಾಜಿಕ ಹೋರಾಟಗಾರ ಕೋಟ ಗಿರೀಶ್ ನಾಯಕ್, ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ, ದಲಿತ ಸಂಘಟನೆಯ ಹಿರಿಯ ಮುಖಂಡ ಶ್ಯಾಮ್ ಸುಂದರ್ ತೆಕ್ಕಟ್ಟೆ, ಮಾಜಿ ಜಿ.ಪಂ ಸದಸ್ಯ ಗಣಪತಿ ಟಿ.ಶ್ರೀಯಾನ್ ಅವರು ನಿರ್ಗಮನ ಠಾಣಾಧಿಕಾರಿಯವರ ಕರ್ತವ್ಯ ನಿರ್ವಹಣೆಯ ಕುರಿತು ಮಾತನಾಡಿದರು.
ಕೋಟ ಪೊಲೀಸ್ ನೂತನ ಠಾಣಾಧಿಕಾರಿ ರಾಜಗೋಪಾಲ , ಜಿ.ಪಂ ಸದಸ್ಯ ರಾಘವೇಂದ್ರ ಬಾರಿಕೆರೆ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯ ಭೋಜ ಪೂಜಾರಿ, ಕೋಟ ಪಂಚಾಯಿತಿ ಸದಸ್ಯ ಭುಜಂಗ ಗುರಿಕಾರ್, ಸಂತೋಷ್ ಪ್ರಭು ಹಾಗೂ ಕೋಟ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಇದೇ ಸಂದರ್ಭ ಕೋಟ ಠಾಣಾಧಿಕಾರಿ ಕಬ್ಬಾಳ್ ರಾಜ್ ಅವರ ಪತ್ನಿ ಮತ್ತು ಕೋಟ ಠಾಣೆಯಿಂದ ವರ್ಗಾವಣೆಗೊಂಡ ಡಬ್ಲ್ಯೂಪಿಎಸ್‌ಐ ಮುಕ್ತಾಬಾ ಇವರನ್ನು ಗುರುತಿಸಿ ಗೌರವಿಸಲಾಯಿತು. ಶಿಕ್ಷಕ ಸಂತೋಷ್ ಸ್ವಾಗತಿಸಿ, ನಿರೂಪಿಸಿದರು. ಸುರೇಶ್ ಹೆಮ್ಮಾಡಿ ವಂದಿಸಿದರು.