ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಕುಂದಾಪುರ ಇವರ ಆಶ್ರಯದಲ್ಲಿ ಜ್ಞಾನ ಭಾರತಿ ತಾಂತ್ರಿಕ ತರಬೇತಿ ಕೇಂದ್ರ ಕುಂದಾಪುರದ ಸಹಯೋಗದೊಂದಿಗೆ ಒಂದು ವಾರಗಳ ಕಾಲ ನಡೆದ ಕರಕುಶಲ ವಸ್ತು ತಯಾರಿಕ ಕಾರ್ಯಾಗಾರದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಜ್ಞಾನ ಭಾರತಿ ಸಂಸ್ಥೆಯ ಪ್ರಾಂಶುಪಾಲರಾದ ರಾಘವೇಂದ್ರ ಗೋಪಾಡಿ ವಹಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಅಮರ್ ಪ್ರಸಾದ್ ಶೆಟ್ಟಿ, ಸುದ್ದಿಮನೆ ಸಂಪಾದಕ ಸಂತೋಷ ಕೋಣಿ, ಸ್ವ ಉದ್ಯೋಗ ಮತ್ತು ಕರಕುಶಲ ವಸ್ತುಗಳ ಅಗತ್ಯತೆಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಪದ್ಮಿನಿ ತರಬೇತಿಯ ಬಗ್ಗೆ ಮಾತನಾಡಿದರು. ಜ್ಞಾನ ಭಾರತಿ ಸಂಸ್ಥೆಯ ಉಪನ್ಯಾಸಕಿ ಅಶ್ವಿನಿ ಉಪಸ್ಥಿತರಿದ್ದರು. ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಕುಂದಾಪುರ ಇದರ ಸಮನ್ವಯಾಧಿಕಾರಿ ಶ್ರೀಮತಿ ಸುಶೀಲ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರಾರ್ಥಿ ಶ್ರೀಮತಿ ಆರಾಧ್ಯ ಪಿ ಉಪಾಧ್ಯ ಕೋಟೇಶ್ವರ ಸ್ವಾಗತಿಸಿ, ಜ್ಞಾನ ಭಾರತಿ ಸಂಸ್ಥೆಯ ಉಪನ್ಯಾಸಕ ಪ್ರಶಾಂತ ಕುಮಾರ್ ವಂದಿಸಿದರು.